

ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅಂದಾಕ್ಷಣ ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ಆರಾಧಾನ ಮನೋಭಾವ ಮೂಡುತ್ತದೆ. ಅವರು ನಮ್ಮೊಂದಿಗೆ ಈಗ ಇಲ್ಲವಾದರೂ ಅಭಿಮಾನಿಗಳ ಮನ ಅಪ್ಪುಗಾಗಿ ಮಿಡಿಯುತ್ತಲೇ ಇದೆ. ಲೆಕ್ಕವಿದ್ದಷ್ಟು ಮಂದಿ ಪೂಜನೀಯ ಭಾವದಲ್ಲಿ ಅಪ್ಪು ಫೋಟೋವನ್ನು ತಮ್ಮ ಮನೆಗಳಲ್ಲಿ ಇಟ್ಟುಕೊಂಡು ನಿತ್ಯ ನಮಿಸುತ್ತಿದ್ದಾರೆ. ಅಂತಹ ವ್ಯಕ್ತಿತ್ವ ಪುನೀತ್ರದ್ದು. ಸಿನಿಮಾ, ಅಭಿನಯ, ಸಾಮಾಜಿಕ ಕಾರ್ಯದಲ್ಲೂ ಅಪ್ಪು ಅವರು ತನ್ನದೇ ಆದ ತತ್ವ ಸಿದ್ಧಾಂತ ಇಟ್ಟುಕೊಂಡಿದ್ದರು.
ಅಂತಹ ಅಪ್ಪುಗೆ 'ಏಕ್ ಲವ್ ಯಾ' ಚಿತ್ರತಂಡವೊಂದು ಅವಮಾನ ಮಾಡಿದೆ. ಈ ಸುದ್ದಿ ತಿಳಿದು ಅಪ್ಪು ಅಭಿಮಾನಿಗಳು ಕಿಡಿಕಾರಿದ್ದಾರೆ. 'ಏಕ್ ಲವ್ ಯಾ' ಸಿನಿಮಾದ 3ನೇ ಸಾಂಗ್ ರಿಲೀಸ್ ವೇಳೆ ಅಪ್ಪು ಫೋಟೋ ಮುಂದೆ ದೊಡ್ಡ ಪ್ರಮಾದ ನಡೆದಿದೆ. ಜೀವನದಲ್ಲಿ ಅಪ್ಪು ಅಳವಡಿಸಿಕೊಂಡ ನೀತಿಗೆ 'ಏಕ್ ಲವ್ ಯಾ' ಟೀಮ್ ಧಕ್ಕೆ ತಂದಿದೆ. ವೇದಿಕೆಯಲ್ಲಿ ಅಪ್ಪು ಫೋಟೋಗೆ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರತಂಡ, ಬಳಿಕ ಅದೇ ಫೋಟೋ ಮುಂದೆಯೇ ಹುಡುಗಿಯರ ಕೈಯಲ್ಲಿ ಶಾಂಪೇನ್ ಬಾಟಲಿ ಓಪನ್ ಮಾಡಿಸಿ ಎಂಜಾಯ್ ಮಾಡಿದ್ದಾರೆ. ಕುಡಿತ ಹಾಗೂ ವ್ಯಸನಗಳನ್ನ ತಮ್ಮ ಸಿನಿಮಾದಲ್ಲೂ ತೋರಿಸಲು ಅಪ್ಪು ಇಷ್ಟ ಪಡ್ತಾಯಿರಲಿಲ್ಲ. ಅಂಥವರ ಫೋಟೋ ಮುಂದೆ ಹುಡುಗಿಯರ ಚಿಯರ್ಸ್, ಶಾಂಪೇನ್ ಓಪನ್ ಮಾಡಿಸಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಅಪ್ಪು ನಮ್ಮನ್ನಗಲಿ 2 ವಾರ ಕಳೆದರೂ ಅಭಿಮಾನಿಗಳ ಮನದಲ್ಲಿರುವ ಮಡುಗಟ್ಟಿರುವ ನೋವು ಕಿಂಚಿತ್ತೂ ಕರಗಿಲ್ಲ. ಇಂತಹ ಸ್ಥಿತಿಯಲ್ಲೂ ಏಕ್ ಲವ್ ಯಾ ಸಿನಿಮಾ ತಂಡಕ್ಕೆ ಅಪ್ಪು ಫೋಟೋ ಎದುರೇ ಮೋಜು-ಮಸ್ತಿ ಬೇಕಿತ್ತಾ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಉಗಿಯುತ್ತಿದ್ದಾರೆ.