ಕೆ.ಆರ್​. ಆಸ್ಪತ್ರೆಯಲ್ಲಿ ಪೈಶಾಚಿಕ ಕೃತ್ಯ: ವಾರ್ಡ್​ನ ಕಿಟಕಿ ಗ್ರಿಲ್ ಕಿತ್ತು ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ

KR Hospital
Published on

ಮೈಸೂರು: ಕೆ.ಆರ್​. ಆಸ್ಪತ್ರೆಯ ವಾರ್ಡ್​ನಲ್ಲೇ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ವಾರ್ಡಿನ ಕಿಟಕಿ ಗ್ರಿಲ್​ ಕಿತ್ತು, ಒಳ ನುಗ್ಗಿ ಪೈಶಾಚಿಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

30 ವರ್ಷದ ಮಹಿಳೆ ಮೇಲೆ ಅಪರಿಚಿತ ವ್ಯಕ್ತಿಯಿಂದ ಅಮಾನುಷ ಕೃತ್ಯ ನಡೆದಿದೆ. ರಾತ್ರಿ ವೇಳೆ ಕಿಟಕಿ ಮೂಲಕ ನುಗ್ಗಿ ಆರೋಪಿ ಅತ್ಯಾಚಾರ ಎಸಗುತ್ತಿದ್ದನಂತೆ. ಈ ಬಗ್ಗೆ ವೃದ್ಧೆ ಮಾಹಿತಿ ನೀಡಿದರೂ ವೈದ್ಯರು ಕ್ರಮ ಕೈಗೊಳ್ಳದೇ ಇರುವ ಆರೋಪವಿದೆ. ಅಲ್ಲದೆ, ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರೆನ್ನಲಾಗಿದೆ.

ಇದೀಗ ಪ್ರಕರಣ ಮಾನವ ಹಕ್ಕುಗಳ ಸೇವಾ ಸಮಿತಿಯಿಂದ ಬೆಳಕಿಗೆ ಬಂದಿದೆ. ಅದೇ ವಾರ್ಡ್​ನ ವೃದ್ಧೆಯಿಂದ ಸತ್ಯ ಬಯಲಾಗಿದೆ. ಅತ್ಯಾಚಾರ ಬಗ್ಗೆ ವಾರದ ಹಿಂದೆಯೇ ವೃದ್ಧೆ ವೈದ್ಯರಿಗೆ ಮಾಹಿತಿ ನೀಡಿದಳು. ಆದರೆ, ಮಾಹಿತಿ ನೀಡಿದ ವೃದ್ಧೆ ಮೇಲೆಯೇ ಹಲ್ಲೆ ಮಾಡಿ ಬಾಯಿ ಬಿಡದಂತೆ ಆಸ್ಪತ್ರೆ ಸಿಬ್ಬಂದಿ ಬೆದರಿಕೆ ಹಾಕಿರುವ ಅರೋಪವು ಇದೆ.

ಕೂಗಳತೆ ದೂರದಲ್ಲಿರುವ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕೃತ್ಯ ನಡೆದಿದೆ. ಮಾನವ ಹಕ್ಕುಗಳ ಸೇವಾ ಸಮಿತಿ ನೀಡಿದ ಮಾಹಿತಿಯಿಂದ ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಇತ್ತ ವಿಷಯ ಬಹಿರಂಗವಾಗುತ್ತಿದ್ದಂತೆ ಆಸ್ಪತ್ರೆ ಭದ್ರತಾ ಸಿಬ್ಬಂದಿ ಪರಾರಿಯಾಗಿದ್ದಾರೆ.

ಪೊಲೀಸರು ಬಂದರೂ ವೈದ್ಯರು ಮಾತ್ರ ಇನ್ನು ಸ್ಥಳಕ್ಕೆ ಬಂದಿಲ್ಲ. ಇತ್ತ ಅಮಾನವೀಯ ಕೃತ್ಯ ಕೇಳಿ ನೆರೆ-ಹೊರೆ ವಾರ್ಡ್​ನ ರೋಗಿಗಳ ಪೋಷಕರು ಬೆಚ್ಚಿಬಿದ್ದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net