More

    ಎರಡೇ ಸಾಕಾ? 3 ಬೇಕಾ?: ಲಸಿಕೆ ಡೋಸೇಜ್ ಬಗ್ಗೆ ಜಯದೇವ ಆಸ್ಪತ್ರೆ ಅಧ್ಯಯನ

    ಬೆಂಗಳೂರು: ಕೋವಿಡ್ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಎರಡು ಡೋಸ್ ಲಸಿಕೆ ಪಡೆದರೆ ಸಾಕೇ? ಅಥವಾ 3ನೇ ಡೋಸ್ ಅಗತ್ಯವಿದೆಯೇ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಉತ್ತರ ಕಂಡುಕೊಳ್ಳಲು ಜಯದೇವ ಹೃದಯ ವಿಜ್ಞಾನ ಸಂಶೋಧನಾ ಸಂಸ್ಥೆ ಅಧ್ಯಯನಕ್ಕೆ ಮುಂದಾಗಿದೆ.

    ಕೋವಿಡ್ ಲಸಿಕೆ ಎರಡೂ ಡೋಸ್ ಪಡೆದ ಬಳಿಕ ವ್ಯಕ್ತಿಯಲ್ಲಿ ಯಾವ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿರುತ್ತದೆ ಎಂದು ತಿಳಿಯುವುದು ಅಧ್ಯಯನದ ಉದ್ದೇಶವಾಗಿದೆ. ಎರಡೂ ಡೋಸ್ ಲಸಿಕೆ ಪಡೆದ ಬಳಿಕ ಮೂರನೇ ಡೋಸ್ ಲಸಿಕೆಯ ಅಗತ್ಯವಿದೆಯೇ ಅಥವಾ ಎರಡು ಡೋಸ್ ಲಸಿಕೆಯೇ ದೀರ್ಘಾವಧಿ ಕೆಲಸ ಮಾಡಲಿದೆಯೇ ಎನ್ನುವುದನ್ನು ತಿಳಿಯಬೇಕಿದೆ. ಹೀಗಾಗಿ, ಎರಡೂ ಡೋಸ್ ಪಡೆದವರನ್ನು 9 ತಿಂಗಳ ಬಳಿಕ ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಜಯದೇವ ಆಸ್ಪತ್ರೆಯ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. ಕೋವಿಡ್ ಲಸಿಕೆಯು ಎಷ್ಟು ಸಮಯದವರೆಗೆ ವ್ಯಕ್ತಿಯನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎನ್ನುವುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾಯಗಳು (ಆಂಟಿಬಾಡಿ) ವೃದ್ಧಿಯಾಗಿರುತ್ತವೆ ಎನ್ನುವುದರ ಬಗ್ಗೆ ಲಸಿಕೆ ತಯಾರಿಕಾ ಕಂಪನಿಗಳು ಸ್ಪಷ್ಟ ಮಾಹಿತಿ ನೀಡಿಲ್ಲ. ಹಾಗಾಗಿ, ಈ ಕುರಿತು ಅಧ್ಯಯನ ನಡೆಸಲು ಯೋಜನೆ ರೂಪಿಸಲಾಗಿದೆ.

    ಮೂರನೇ ಡೋಸ್​ಗೆ ಹಲವು ದೇಶಗಳ ಚಿಂತನೆ: ಡೆಲ್ಟಾ ಪ್ರಭೇದವನ್ನು ತಡೆಗಟ್ಟಲು ಹೆಚ್ಚುವರಿ ಬೂಸ್ಟರ್ ಅಂದರೆ 3ನೇ ಡೋಸ್ ಲಸಿಕೆ ನೀಡುವ ಬಗ್ಗೆ ಚಿಂತನೆ ಆರಂಭವಾಗಿದೆ. ಥಾಯ್ಲೆಂಡ್, ಬಹರೇನ್ ಮತ್ತು ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ದೇಶಗಳು ಈಗಾಗಲೇ ಚೀನಾದ ಸಿನೊವ್ಯಾಕ್, ಸಿನೊಫಾಮ್ರ್ ಮತ್ತು ಅಸ್ಟ್ರಾಜೆನಿಕಾ ಲಸಿಕೆ ಪಡೆದವರಲ್ಲಿ ಕೆಲವರಿಗಾದರೂ ಮೂರನೇ ಡೋಸ್ ನೀಡಲು ನಿರ್ಧರಿಸಿವೆ. ಕೋವಿಡ್ ಲಸಿಕೆಯ ಮೂರನೇ ಬೂಸ್ಟರ್ ಡೋಸ್ ನೀಡಲು ಅನುಮತಿ ನೀಡುವಂತೆ ಅಮೆರಿಕದ ಫೈಜರ್ ಕಂಪನಿ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಮೂರನೇ ಶಾಟ್​ನಿಂದ ರೋಗನಿರೋಧಕ ಶಕ್ತಿ ಹೆಚ್ಚಿ ಕರೊನಾವೈರಸ್ ವಿರುದ್ಧ 5ರಿಂದ 10 ಪಟ್ಟು ಹೆಚ್ಚು ರಕ್ಷಣೆ ಸಿಗುತ್ತದೆ ಎಂಬ ಆರಂಭಿಕ ದತ್ತಾಂಶದ ಆಧಾರದಲ್ಲಿ ಈ ಕೋರಿಕೆ ಮಂಡಿಸಲಿದೆ ಎನ್ನಲಾಗಿದೆ.

    ಮೊದಲ ಡೋಸ್ ಪಡೆದವರ ಅಧ್ಯಯನ: ಕೋವಿಡ್ ಮೊದಲ ಡೋಸ್ ಪಡೆದವರಲ್ಲಿ ಪ್ರತಿಕಾಯ ಯಾವ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿದೆ ಎನ್ನುವುದರ ಬಗ್ಗೆ ಅಧ್ಯಯನ ನಡೆಸಲಾಗುವುದು. ಈಗ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ನಿಗದಿಪಡಿಸಲಾಗಿದೆ. ಈ ಅಂತರದಲ್ಲಿ ಉತ್ತಮವಾಗಿ ಪ್ರತಿಕಾಯ ವೃದ್ಧಿಯಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ, ವಿವಿಧ ವಯೋಮಾನದವರನ್ನು ಮೊದಲ ಡೋಸ್ ಪಡೆದ 60 ದಿನಗಳ ಬಳಿಕ ಅಧ್ಯಯನಕ್ಕೆ ಒಳಪಡಿಸಲಾಗುವುದು.

    ಶೇ. 77 ಜನರಲ್ಲಿ ಪ್ರತಿಕಾಯ: ಕಳೆದ ಮೇ ತಿಂಗಳಲ್ಲಿ ಎರಡೂ ಡೋಸ್ ಲಸಿಕೆ ಪಡೆದ ವೈದ್ಯಕೀಯ ಸಿಬ್ಬಂದಿಯನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಶೇ 77 ಸಿಬ್ಬಂದಿಯಲ್ಲಿ ಉತ್ತಮವಾಗಿ ಪ್ರತಿಕಾಯ ವೃದ್ಧಿಯಾಗಿರುವುದು ತಿಳಿದುಬಂದಿತ್ತು. ಅಧ್ಯಯನಕ್ಕೆ ಒಳಪಟ್ಟ 140 ಸಿಬ್ಬಂದಿ ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡಿದ್ದರು.

    ಎರಡೇ ಸಾಕಾ? 3 ಬೇಕಾ?: ಲಸಿಕೆ ಡೋಸೇಜ್ ಬಗ್ಗೆ ಜಯದೇವ ಆಸ್ಪತ್ರೆ ಅಧ್ಯಯನಈಗಾಗಲೇ ಈಗಾಗಲೇ 18ರಿಂದ 44 ವರ್ಷದವರು ಕೋವಿಶೀಲ್ಡ್ ಮೊದಲ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆದು 60 ದಿನಗಳು ಪೂರ್ಣಗೊಂಡ ಬಳಿಕ ಅಧ್ಯಯನ ಆರಂಭಿಸಲಾಗುವುದು. ಇದಾದ ಒಂಬತ್ತು ತಿಂಗಳ ಬಳಿಕ ಎರಡೂ ಡೋಸ್ ಲಸಿಕೆ ಪಡೆದವರನ್ನು ಅಧ್ಯಯನಕ್ಕೆ ಒಳಪಡಿಸಿ, ಮೂರನೇ ಡೋಸ್​ನ ಅಗತ್ಯತೆ ಬಗ್ಗೆ ತಿಳಿಯಲಾಗುವುದು.

    | ಡಾ. ಸಿ.ಎನ್. ಮಂಜುನಾಥ್ ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts