More

  ರೈಲಿನಲ್ಲಿ ಸೆರೆಸಿಕ್ಕ ಹುಬ್ಬಳ್ಳಿಯ ಅಂಜಲಿ ಹಂತಕ

  ವಿಜಯವಾಣಿ ಸುದ್ದಿಜಾಲ ದಾವಣಗೆರೆ

  ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿಯನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ ದಾವಣಗೆರೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

  ಆರೋಪಿಯು ಗುರುವಾರ ವಿಶ್ವ ಮಾನವ ಎಕ್ಸ್​ಪ್ರೆಸ್ ರೈಲಿನಲ್ಲಿ ಲಕ್ಷ್ಮೀ ಎಂಬ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಆ ಮಹಿಳೆ ಕೈ ಅಡ್ಡ ಹಿಡಿದಿದ್ದರಿಂದ ಆಕೆಯ ಕೈಗೆ ತೀವ್ರ ಗಾಯಗಳಾಗಿದ್ದು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಆರೋಪಿಯು ಗುರುವಾರ ಬೆಳಗ್ಗೆ ಮೈಸೂರಿನಿಂದ ವಿಶ್ವಮಾನವ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣ ಆರಂಭಿಸಿದ್ದ. ಸಿದ್ಧಗಂಗಾ ಮಠದ ಶಾಲೆಗೆ ಮಗನನ್ನು ಸೇರಿಸಲು ತುಮಕೂರಿಗೆ ಆಗಮಿಸಿದ್ದ ಗದಗ ಜಿಲ್ಲೆಯ ಮುಳಗುಂದದ ಲಕ್ಷ್ಮೀ – ಮಹಾಂತೇಶ ಸವಟೂರು ದಂಪತಿ ಮತ್ತು ಅವರ ಪುತ್ರ ವಿಜಯಕುಮಾರ್ ಕೆಲಸದ ಬಳಿಕ ಅಲ್ಲಿಂದ ಅದೇ ರೈಲು ಏರಿದರು. ಅರಸೀಕೆರೆ ನಿಲ್ದಾಣದಲ್ಲಿ ಆರೋಪಿ ವಿಶ್ವನಾಥ, ಲಕ್ಷ್ಮೀ ಅವರಿದ್ದ ಬೋಗಿಗೆ ಬಂದು ಪಕ್ಕದ ಸೀಟಿನಲ್ಲಿ ಕುಳಿತುಕೊಂಡ. ರೈಲು ಚಿಕ್ಕಜಾಜೂರು ನಿಲ್ದಾಣದಿಂದ ಹೊರಟ ನಂತರ ಲಕ್ಷ್ಮೀ ಅವರು ವಾಶ್ ರೂಮ್ೆ ತೆರಳಿದರು. ಅವರನ್ನು ಹಿಂಬಾಲಿಸಿದ ಹಂತಕ, ವಾಶ್ ರೂಮ್ ಬಾಗಿಲ ಕಿಂಡಿಯಿಂದ ಇಣುಕಿ ನೋಡಿದ್ದಾನೆ. ಕೂಡಲೇ ಹೊರ ಬಂದ ಲಕ್ಷ್ಮೀ ಅವರು, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಆರೋಪಿಯು ತನ್ನ ಬಳಿ ಇದ್ದ ಚಾಕುವಿನಿಂದ ಇರಿಯಲು ಹೋಗಿದ್ದಾನೆ. ಲಕ್ಷ್ಮೀ ಅವರು ತಮ್ಮ ಕೈ ಅಡ್ಡ ಹಿಡಿದಿದ್ದರಿಂದ ಅವರ ಕೈಗೆ ತೀವ್ರ ಗಾಯವಾಯಿತು. ಅವರು ಕಿರುಚಿಕೊಂಡಾಗ ಪತಿ ಮಹಾಂತೇಶ ಮತ್ತು ಸಹ ಪ್ರಯಾಣಿಕರು ಬಂದು ವಿಚಾರಿಸುವ ಹೊತ್ತಿಗೆ ಆರೋಪಿ ಪರಾರಿಯಾಗಿದ್ದ. ಲಕ್ಷ್ಮೀ ಅವರಿಗೆ ದಾವಣಗೆರೆ ನಿಲ್ದಾಣದಲ್ಲಿ ಇಳಿದುಕೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಯಿತು. ಶುಕ್ರವಾರ ಬೆಳಗ್ಗೆ ಲಕ್ಷ್ಮೀ ಅವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.

  ರೈಲಿನಿಂದ ಜಿಗಿದ: ರೈಲು ಚಿಕ್ಕಜಾಜೂರು- ಮಾಯಕೊಂಡ ಮಧ್ಯೆ ಇದ್ದಾಗ ಆರೋಪಿಯು ಚಲಿಸುವ ರೈಲಿನಿಂದ ಕೆಳಗೆ ಜಿಗಿದಿದ್ದಾನೆ. ರೈಲಿನ ಬಾಗಿಲ ಬಳಿಯಿಂದ ಹೋಗಿ ಕಿಟಕಿಗೆ ಸ್ವಲ್ಪ ಹೊತ್ತು ಜೋತು ಬಿದ್ದಿದ್ದಾನೆ. ಒಂದು ಹಂತದಲ್ಲಿ ಕೈಜಾರಿ ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ಆತನ ತಲೆಗೆ ಗಂಭೀರ ಗಾಯಗಳಾಗಿದ್ದವು. ಸ್ಥಳೀಯರು 108ಗೆ ಕರೆ ಮಾಡಿ ಆಂಬುಲೆನ್ಸ್​ನಲ್ಲಿ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟರು. ವಿಷಯ ತಿಳಿದ ದಾವಣಗೆರೆ ರೈಲ್ವೆ ಪೊಲೀಸರು ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ್ದರು.

  ವಿಕೃತ ಕಾಮಿ?: ಹಂತಕ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತನ ವರ್ತನೆಗಳನ್ನು ಗಮನಿಸಿದರೆ ಆತ ವಿಕೃತ ಕಾಮಿಯೆ ಎಂಬ ಅನುಮಾನ ವ್ಯಕ್ತವಾಗಿದೆ. ರೈಲಿನಲ್ಲಿ ಮಹಿಳೆಯೊಂದಿಗೆ ಆತ ವರ್ತಿಸಿದ ರೀತಿ, ವಾಶ್​ರೂಮ್ಲ್ಲಿ ಇಣುಕಿ ನೋಡಿದ್ದು, ನಂತರ ಆಕೆಯ ಕೊಲೆಗೆ ಯತ್ನಿಸಿದ್ದು ಆತನ ಮಾನಸಿಕತೆಯ ಬಗ್ಗೆ ತಿಳಿಸುತ್ತದೆ ಎನ್ನುತ್ತವೆ ಮೂಲಗಳು.

  ಪೊಲೀಸರ ಸಮಯಪ್ರಜ್ಞೆ : ಆಸ್ಪತ್ರೆಗೆ ಭೇಟಿ ನೀಡಿದಾಗ ಮೊದಲು ಆತ ಅಂಜಲಿಯ ಹಂತಕ ಎಂಬುದು ರೈಲ್ವೆ ಪೊಲೀಸರಿಗೆ ಗೊತ್ತಿರಲಿಲ್ಲ. ಕೆಲ ಹೊತ್ತಿನ ಬಳಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ ಆರೋಪಿಯ ಭಾವಚಿತ್ರವನ್ನು ಗಮನಿಸಿದ ಎಎಸ್​ಐ ನಾಗರಾಜ ಮತ್ತು ಪೊಲೀಸ್ ಇನ್​ಸ್ಪೆಕ್ಟರ್ ಸಂತೋಷ್ ಎಂ. ಪಾಟೀಲ್ ಅವರಿಗೆ ಅನುಮಾನ ಬಂದು ರಾತ್ರಿ ಮತ್ತೆ ಆಸ್ಪತ್ರೆಗೆ ತೆರಳಿ ಖಚಿತಪಡಿಸಿಕೊಂಡರು. ಅವರು ನೀಡಿದ ಮಾಹಿತಿ ಆಧರಿಸಿ ಹುಬ್ಬಳ್ಳಿ ಪೊಲೀಸರು ಆಗಮಿಸಿ ಆರೋಪಿ ವಿಶ್ವನಾಥನನ್ನು ವಶಕ್ಕೆ ಪಡೆದು ಕರೆದೊಯ್ದರು. ಪೊಲೀಸರು ಬರುವ ಮೊದಲು ಆರೋಪಿಯು ಆಸ್ಪತ್ರೆಯ ಹೊರಗೆ ಬಂದು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ ಎಂದು ಮೂಲಗಳು ತಿಳಿಸಿವೆ.

  ಹತ್ಯೆ ಖಂಡಿಸಿ ಪ್ರತಿಭಟನೆ: ಅಂಜಲಿ ಹತ್ಯೆ ಖಂಡಿಸಿ ಮೇ 18ರಂದು ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದ್ದಾರೆ. ಶುಕ್ರವಾರ ಶ್ರೀರಾಮ ಸೇನೆಯಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

  ಮೈಸೂರಿನಲ್ಲಿ ಸಪ್ಲೈಯರ್ ಆಗಿದ್ದ ಗಿರೀಶ್ ಸಾವಂತ : ಮೈಸೂರು: ಗಿರೀಶ್ ನಗರದಲ್ಲಿ ಹೋಟೆಲ್​ನಲ್ಲಿ ಸಪ್ಲೈಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ನಗರದ ಮಹಾರಾಜ ಹೋಟೆಲ್​ನಲ್ಲಿ ನಾಲ್ಕು ತಿಂಗಳಿಂದ ಸಪ್ಲೈಯರ್ ಆಗಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ. ವಿನಾಯಕ ನರ್ಸಿಂಗ್ ಕೇರ್ ಏಜೆನ್ಸಿ ಮೂಲಕ ಬಂದಿದ್ದ ಆರೋಪಿ ಗಿರೀಶ್​ನನ್ನು ಮೊದಲಿಗೆ ಹೋಟೆಲ್ ಮಾಲೀಕ ಗೋವರ್ಧನ್ ತಮ್ಮ ತಂದೆಯನ್ನು ನೋಡಿಕೊಳ್ಳಲು ನೇಮಕ ಮಾಡಿಕೊಂಡಿದ್ದರು. ಬಳಿಕ ರೂಮ್ ಬಾಯ್, ಸಪ್ಲೈಯರ್ ಆಗಿ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಆತ ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ ಎನ್ನಲಾಗಿದೆ.

  ಕೊಲೆಗಾರ ಗಾಂಜಾ ವ್ಯಸನಿ : ದಾವಣಗೆರೆಯಲ್ಲಿ ಸೆರೆಸಿಕ್ಕ ವಿಶ್ವನಾಥನನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಶ್ವನಾಥನನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗಿದೆ. ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಮೂಲಗಳ ಪ್ರಕಾರ ಮೂವರು ಸ್ನೇಹಿತರೊಂದಿಗೆ ಬುಲೆಟ್ ಕಳ್ಳತನ ಮಾಡುತ್ತಿದ್ದ. ಈತನ ಸ್ನೇಹಿತರು ಈಗಾಗಲೇ ಜೈಲು ಪಾಲಾಗಿದ್ದು, ವಿಶ್ವ ಗಾಂಜಾ ವ್ಯಸನಿಯಾಗಿದ್ದ ಎಂದು ಹೇಳಲಾಗುತ್ತಿದೆ. ಕಿಮ್ಸ್​ಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಆರೋಪಿಯನ್ನು ಭೇಟಿಯಾಗಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆಯುಕ್ತೆ, ವಿಶ್ವನಾಥನ ಬೆನ್ನು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ. ಸದ್ಯ ಅರೆ ಪ್ರಜ್ಞಾವಸ್ಥೆಯಲ್ಲಿದ್ದು, ಅವರಿಬ್ಬರೂ ಪ್ರೀತಿ ಮಾಡುತ್ತಿದ್ದರೆಂದು ಹೇಳಿದ್ದಾನೆ. ಗಿರೀಶನಿಗೆ ಸಂಪೂರ್ಣ ಪ್ರಜ್ಞೆ ಬಂದ ಬಳಿಕ ಮತ್ತಷ್ಟು ಹೇಳಿಕೆ ಪಡೆದುಕೊಳ್ಳಲಾಗುವುದು ಎಂದರು.

  ಮತ್ತೊಂದೆಡೆ ಗುರುವಾರ ಬೆಳಗ್ಗೆ ಅಂಜಲಿ ಕುಟುಂಬದವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಕುಟುಂದವರಿಗೆ ಸಾಂತ್ವನ ಹೇಳಿದರು.

  ವರದಿ ಸಲ್ಲಿಕೆಗೆ ಸೂಚನೆ : ಬೆಂಗಳೂರು: ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಪದೇಪದೆ ಸಂಭವಿಸುತ್ತಿರುವ ಕೊಲೆ ಪ್ರಕರಣಗಳ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎಡಿಜಿಪಿ ಅವರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಅಂಜಲಿ ಕೊಲೆ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ಪೊಲೀಸರ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಅಮಾನತು ಮಾಡಲಾಗಿದೆ. ಬೆದರಿಕೆ ಬಗ್ಗೆ ಮೊದಲೇ ದೂರು ಕೊಟ್ಟಿದ್ದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪೋಷಕರು ಲಿಖಿತ ದೂರು ಕೊಟ್ಟಿಲ್ಲ. ಆ ಬಗ್ಗೆ ತಿಳಿಸಿದ್ದರು ಎಂಬುದು ನನಗಿರುವ ಮಾಹಿತಿ. ಅದಕ್ಕಾಗಿ ಇನ್​ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ. ಪೋಷಕರು ನಿಜವಾಗಿಯೂ ಹೇಳಿದ್ದರೆ? ಅಥವಾ ಇಲ್ಲವೇ ಎಂಬ ತನಿಖೆ ನಡೆಯುತ್ತದೆ ಎಂದರು.

  ರಾಜ್ಯದಲ್ಲಿ ಹೆಣ್ಣುಮಕ್ಕಳ ಕೊಲೆ ಭಾಗ್ಯ

  ಬೆಂಗಳೂರು: ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ಕಾಂಗ್ರೆಸ್ ಸರ್ಕಾರ ಬೀಗುತ್ತಿದೆ. ಆದರೆ ಕಾಂಗ್ರೆಸ್​ನ ಒಂದು ವರ್ಷದ ಆಡಳಿತಾವಧಿಯಲ್ಲಿ ರಾಜ್ಯವು ಕ್ರಿಮಿನಲ್​ಗಳು, ಕೊಲೆಗಡುಕರ ತಾಣವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರಲಾರದ ಸ್ಥಿತಿಗೆ ತಲುಪಿರುವ ಕಾಂಗ್ರೆಸ್ ಸರ್ಕಾರದ ಅಸಮರ್ಥ ಗೃಹ ಸಚಿವ, ಸರಣಿ ಘಟನೆಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

  b Y v

  ಜಾಲತಾಣದಲ್ಲಿ ಈ ಕುರಿತು ಬಿ.ವೈ.ವಿಜಯೇಂದ್ರ ಸುದೀರ್ಘ ಸಂದೇಶ ಹಂಚಿಕೊಂಡಿದ್ದಾರೆ. ಹಾಡಹಗಲೇ ಅಮಾಯಕ ಹೆಣ್ಣುಮಕ್ಕಳ ಬರ್ಬರ ಹತ್ಯೆ, ಮನೆಗಳಿಗೇ ನುಗ್ಗಿ ಗೃಹಲಕ್ಷ್ಮಿಯನ್ನು ಚಾಕುವಿನಿಂದ ಇರಿದು ಕೊಲ್ಲಲಾಗುತ್ತಿದೆ. ಹೆಣ್ಣುಮಕ್ಕಳ ಸರಣಿ ಕೊಲೆಗಳು, ಅನುಮಾನದ ಸಾವುಗಳು, ಲೈಂಗಿಕ ದೌರ್ಜನ್ಯ ಪ್ರಕರಣಗಳೇ ಹೆಚ್ಚಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರು ಮನೆಯಿಂದ ಆಚೆ ಬರಲೂ ಭಯಪಡುವ ವಾತಾವರಣ ನಿರ್ವಣವಾಗಿದೆ. ದುರ್ಬಲರು, ಅಬಲೆಯರು ಭರವಸೆ ಹೊತ್ತು ಧೈರ್ಯದಿಂದ ಪೊಲೀಸ್ ಠಾಣೆ ಮೆಟ್ಟಿಲೇರುವ ವಾತಾವರಣವನ್ನು ಕಾಂಗ್ರೆಸ್ ಸರ್ಕಾರ ಕಲ್ಪಿಸಿಲ್ಲ. ನಿಷ್ಕ್ರಿಯ ಆಡಳಿತದಿಂದ ದೇಶದಲ್ಲಿ ರಾಜ್ಯದ ಗೌರವ, ಘನತೆ ಕುಸಿದು ಬೀಳುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

  ಡಿಕೆಶಿಯಿಂದ 100 ಕೋಟಿ ರೂಪಾಯಿ ಆಫರ್: ಹೊಸ ಬಾಂಬ್‌ ಸಿಡಿಸಿದ ದೇವರಾಜೇಗೌಡ

  ದೇಶದ ಮಹಿಳೆಯರು ಯಾಕೆ ಉಚಿತ ಬಸ್‌ ಪ್ರಯಾಣ ಮಾಡಬಾರದು: ಮೋದಿಗೆ ಕೇಜ್ರಿವಾಲ್‌ ಪ್ರಶ್ನೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts