ಕೊಲ್ಲೂರು ದೇವಸ್ಥಾನದ ಧರ್ಮದರ್ಶಿ ಆಯ್ಕೆಯೇ ಅಸಿಂಧು; ಹೈಕೋರ್ಟ್​ನಿಂದ ಮಹತ್ವದ ತೀರ್ಪು

Kollur
Published on

ಉಡುಪಿ: ಪ್ರಖ್ಯಾತ ಪುಣ್ಯಸ್ಥಳವಾಗಿರುವ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಸ್ಥಾನಕ್ಕೆ ಈಗಾಗಲೇ ನಡೆದಿರುವ ಆಯ್ಕೆ ಅಸಿಂಧುಗೊಂಡಿದೆ. ಪ್ರಸ್ತುತ ಆಯ್ಕೆಯನ್ನು ಅಸಿಂಧು ಎಂದು ಹೇಳಿ ಹೈಕೋರ್ಟ್​ ಮಹತ್ವದ ತೀರ್ಪನ್ನು ನೀಡಿದೆ.

ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿರುವ ಕೊಲ್ಲೂರಿನ ಧರ್ಮದರ್ಶಿ ಸ್ಥಾನದ ಕುರಿತ ಮುಂದಿನ ಬೆಳವಣಿಗೆ ಇದೀಗ ಸ್ಥಳೀಯವಾಗಿ ಭಾರಿ ಕುತೂಹಲ ಕೆರಳಿಸಿದೆ. ಚಂದ್ರಶೇಖರ್ ಶೆಟ್ಟಿ ಎಂಬವರನ್ನು ಕೊಲ್ಲೂರು ದೇವಸ್ಥಾನದ ಧರ್ಮದರ್ಶಿಯಾಗಿ ಈ ಹಿಂದೆ ಆಯ್ಕೆ ಮಾಡಲಾಗಿತ್ತು. ಆ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ ಕೆಲವರು ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅದರಲ್ಲೂ ಚಂದ್ರಶೇಖರ್ ಶೆಟ್ಟಿ ಅವರು ಧರ್ಮದರ್ಶಿಯಾಗಿ ಆಯ್ಕೆ ಆಗುವ ಒಂದು ತಿಂಗಳ ಮೊದಲು ದೇವಸ್ಥಾನದ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತೀರ್ಪು ಹೊರಹೊಮ್ಮಿದ್ದು, ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆಯೇ ಮುಳುವಾಗಿದೆ.

ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕವೂ ಸಭೆಯಲ್ಲಿ ಚಂದ್ರಶೇಖರ ಶೆಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಸದಸ್ಯತ್ವ ಹೊಂದಿಲ್ಲದವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವುದು ಹೇಗೆ ಎಂದು ಪ್ರಶ್ನಿಸಿರುವ ಹೈಕೋರ್ಟ್, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net