‘ಬಿಪರ್ಜೋಯ್’ ಸೈಕ್ಲೋನ್ ಸೃಷ್ಟಿ; ಜೂ.9ರ ಬಳಿಕ ಕೇರಳಕ್ಕೆ ಮುಂಗಾರು ಪ್ರವೇಶ!

rain
Published on

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬುಧವಾರ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿಯಾಗಿದೆ. ಇದನ್ನೂ ಓದಿ: 1.6 ಕೋಟಿ ರೂ. ತೆರಿಗೆ ಪಾವತಿಸುವಂತೆ 23 ಬಾರಿ ನೋಟಿಸ್‌; ಕಂಗಾಲಾದ ರೈತ!

ಗೋವಾದ ನೈಋತ್ಯಕ್ಕೆ 880 ಕಿ.ಮೀ., ಮುಂಬೈನ ನೈಋತ್ಯಕ್ಕೆ 990 ಕಿ.ಮೀ., ಗುಜರಾತ್‌ನ ಪೋರಬಂದರ್‌ನ ದಕ್ಷಿಣಕ್ಕೆ 1,060 ಕಿ.ಮೀ, ಪಾಕಿಸ್ತಾನದ ಕರಾಚಿಯ 1,360 ಕಿ.ಮೀ.ದೂರದಲ್ಲಿ ಸೈಕ್ಲೋನ್‌ ಇದ್ದು, ಅರಬ್ಬಿ ಸಮುದ್ರದ ದಕ್ಷಿಣದತ್ತ ಮಾರುತಗಳ ಚಲಿಸುತ್ತಿವೆ. ಗೋವಾ, ಮಹಾರಾಷ್ಟ್ರ, ಗುಜರಾತ್ ಹಾಗೂ ಕರ್ನಾಟಕದಿಂದ ಸಾವಿರಾರು ಕಿ.ಮೀ. ದೂರದಲ್ಲಿ ಸೈಕ್ಲೋನ್ ಇದೆ. ಈ ಹಿನ್ನೆಲೆಯಲ್ಲಿ ಮೇಲಿನ ರಾಜ್ಯಗಳಲ್ಲಿ ಸೈಕ್ಲೋನ್‌ನಿಂದ ಭಾರಿ ಪ್ರಮಾಣದಲ್ಲಿ ಮಳೆ ಬೀಳುವುದಿಲ್ಲ. ಆದರೆ, ಸಮುದ್ರದಲ್ಲಿ ದೊಡ್ಡ ಮಟ್ಟದ ಅಲೆಗಳು ಏಳಲಿವೆ. ಆದ್ದರಿಂದ, ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರು ತಕ್ಷಣ ವಾಪಸ್ ಬರುವಂತೆ ಹಾಗೂ ಸಮುದ್ರದ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸಲಹೆ ನೀಡಿದೆ.

ಚಂಡಮಾರುತವು ತೇವಾಂಶಭರಿತ ಮೋಡಗಳು ಸೆಳೆದಿರುವ ಕಾರಣದಿಂದಾಗಿ ಬುಧವಾರ (ಜೂ.7) ಕೇರಳಕ್ಕೆ ಆಗಮಿಸಬೇಕಿದ್ದ ಮುಂಗಾರು ಮಾರುತಗಳ ಪ್ರವೇಶಿಸುವುದಕ್ಕೆ ತುಸು ಅಡ್ಡಿಯಾಗಿದೆ. ಆದರೂ, ಸದ್ಯ ಹವಾಮಾನ ಮೂನ್ಸೂಚನೆಯಂತೆ ಅರಬ್ಬಿ ಸಮುದ್ರದ ದಕ್ಷಿಣ ಭಾಗ, ಲಕ್ಷದ್ವೀಪ, ಮಾಲ್ಡೀವ್ಸ್ ಹಾಗೂ ಕೊಮೊರಿನ್ ಪ್ರದೇಶಗಳಲ್ಲಿರುವ ಮುಂಗಾರು ಮಾರುತಗಳು ಮುಂದಕ್ಕೆ ಮುನ್ನಡೆಯಲು ಪರಿಸ್ಥಿತಿ ಅನುಕೂಲವಾಗಿದೆ. ಈ ಹಿನ್ನೆಲೆಯಲ್ಲಿ ಜೂ. 9ರಂದು ಅಥವಾ ನಂತರ ದಿನಾಂಕದಂದು ಕೇರಳ ಕರಾವಳಿಗೆ ಮಾರುತಗಳು ಆಗಮಿಸುವ ಸಾಧ್ಯತೆ ಹೆಚ್ಚಿವೆ. ಕೇರಳಕ್ಕೆ ಆಗಮಿಸಿರುವ ಮಾರುತಗಳು ಪ್ರಬಲವಾದರೆ ಒಂದೆರೆಡು ದಿನಗಳಲ್ಲಿ ಕರ್ನಾಟಕದ ಕರಾವಳಿ ಭಾಗಕ್ಕೆ ಪ್ರವೇಶಿಸಲಿವೆ ಎಂದು ಐಎಂಡಿ ಸ್ಪಷ್ಟಪಡಿಸಿದೆ.

11ರಿಂದ ಮಳೆ ಚುರುಕು

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮುಂದಿನ ಮೂರು ದಿನ ಸಾಧಾರಣ ಮಳೆ ಬೀಳಲಿದೆ. ಆದರೆ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂ. 11ರಿಂದ ಮುಂದಿನ ಎರಡು ದಿನ, ಚಿತ್ರದುರ್ಗ, ತುಮಕೂರಿನಲ್ಲಿ ಜೂ. 11 ಹಾಗೂ ಕೋಲಾರದಲ್ಲಿ ಜೂ 12ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net