

ಬೆಂಗಳೂರು: ಪ್ರಸಕ್ತ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಸೂಕ್ತ ಸಾಧಕರ ಪಟ್ಟಿ ತಯಾರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಸಲ ಬೇರೆಯದೇ ವ್ಯವಸ್ಥೆ ಮಾಡಿದೆ.
ಪ್ರತಿ ವರ್ಷ ಪ್ರಶಸ್ತಿಗೆ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗುತ್ತಿತ್ತು. ಇದಕ್ಕಾಗಿ ಸಾವಿರಾರು ಅರ್ಜಿಗಳು ಬರುತ್ತಿತ್ತು. ಇವರನ್ನು ಸಮಿತಿ ಆಯ್ಕೆ ಮಾಡಿ ಪಾಲಿಕೆಗೆ ಕಳುಹಿಸುತ್ತಿತ್ತು. ಈ ಬಾರಿ ಆಯಾ ವಲಯ ಆಯುಕ್ತರಿಗೆ ಅರ್ಹ ಸಾಧಕರ ಪಟ್ಟಿ ತಯಾರಿಸಲು ಅವಕಾಶ ನೀಡಲಾಗಿದೆ. ನಂತರ, ಎಲ್ಲ ಸಾಧಕರ ವಿವರದ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.
ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ವಿಧಾನಸಭಾ ಕ್ಷೇತ್ರದ ಹೆಸರು, ವಾರ್ಡ್ ಸಂಖ್ಯೆ ಮತ್ತು ಹೆಸರು, ತಾತ್ಕಾಲಿಕವಾಗಿ ಪ್ರಶಸ್ತಿಗೆ ಪರಿಗಣಿಸಬಹುದಾದ ಹೆಸರುಗಳು, ವಿಳಾಸ, ದೂರವಾಣಿ ಸಂಖ್ಯೆ, ಸಾಧನೆಯ ಕ್ಷೇತ್ರ, ಸಂಕ್ಷಿಪ್ತ ವಿವರ, ಶಿಫಾರಸು, ಷರಾ ಮಾಹಿತಿಯನ್ನು ಪಟ್ಟಿಯಲ್ಲಿ ನಮೂದಿಸಿ ಜು.5ರೊಳಗೆ ಸಲ್ಲಿಸಲು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಜಯರಾಮ್ ರಾಯ್‌ಪುರ ಆದೇಶ ಹೊರಡಿಸಿದ್ದಾರೆ.
ಈ ಸಲ ಎಷ್ಟು ಮಂದಿಗೆ ಪ್ರಶಸ್ತಿ?: ವಾರ್ಡ್‌ಗೆ ಒಬ್ಬರಂತೆ ಸೇರಿ ಒಟ್ಟು 198 ಮಂದಿಗೆ ಪ್ರಶಸ್ತಿ ನೀಡಲಾಗುವುದು ಎಂದು ಹೇಳಲಾಗುತ್ತಿದ್ದರೂ ಎಷ್ಟು ಜನರಿಗೆ ಪ್ರಶಸ್ತಿ ನೀಡಬೇಕು, ಪ್ರಶಸ್ತಿ ಮೊತ್ತ ಎಷ್ಟು ಎಂಬಿತ್ಯಾದಿ ಮಾಹಿತಿ ಬಗ್ಗೆ ಪಾಲಿಕೆಗೆ ಸ್ಪಷ್ಟತೆ ಇಲ್ಲದಂತಾಗಿದೆ. ಅಲ್ಲದೆ, ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವ ಪಾಲಿಕೆ ಕೆಂಪೇಗೌಡರ ಜಯಂತಿಗೆ ಇನ್ನೂ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ.
ನೈಜ ಸಾಧಕರನ್ನು ಗುರುತಿಸಿ: ಪ್ರಶಸ್ತಿಗೆ ಹೆಚ್ಚಿನ ಮಹತ್ವ, ಘನತೆ ಇರುವುದರಿಂದ ಅರ್ಹ ಸಾಧಕರನ್ನು ಆಯ್ಕೆ ಮಾಡಬೇಕಿದೆ. ಆದರೆ, ಸಾಕಷ್ಟು ಬಾರಿ ಅಪರಾಧ ಹಿನ್ನೆಲೆ ಹೊಂದಿರುವವರು, ರಾಜಕೀಯ ನಾಯಕರ ಬೆಂಬಲಿಗರು, ಅರ್ಹತೆ ಇಲ್ಲದ ವ್ಯಕ್ತಿಗಳನ್ನು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಿರುವುದುಂಟು. ಹಿಂದೊಮ್ಮೆ 507 ಮಂದಿಗೆ ಪ್ರಶಸ್ತಿ ನೀಡಿರುವ ನಿದರ್ಶನವೂ ಇದೆ. ಪಾಲಿಕೆ ಇತಿಹಾಸದಲ್ಲಿ ಇದೊಂದು ಸಾರ್ವಕಾಲಿಕ ದಾಖಲೆಯೂ ಆಗಿತ್ತು.
ಪ್ರಶಸ್ತಿ ಸಂಖ್ಯೆ ಹೆಚ್ಚಳವಾದಂತೆ 70ಕ್ಕೆ ನಿಗದಿಪಡಿಸಿದ್ದರೂ ವರ್ಷದಿಂದ ವರ್ಷಕ್ಕೆ ಪ್ರಶಸ್ತಿ ಸಂಖ್ಯೆ ಏರಿಕೆಯಾಗಿದೆ. 2018-19ರಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿಗಾಗಿ ಕಿತ್ತಾಟ, ರಂಪಾಟ ನಡೆದಿತ್ತು. ಇದು ಪಾಲಿಕೆಗೆ ಕೆಟ್ಟ ಹೆಸರು ಬರುವಂತೆ ಮಾಡಿತ್ತು. ಇಂಥ ಘಟನೆಗಳು ಮರುಕಳಿಸದಂತೆ ಚಲನಚಿತ್ರ, ಶಿಕ್ಷಣ, ಸಮಾಜ, ಸಾಹಿತ್ಯ, ಸಂಗೀತ ಚಿತ್ರಕಲೆ, ರಂಗಭೂಮಿ, ಕ್ರೀಡೆ, ಸಾಂಸ್ಕೃತಿಕ ಹಾಗೂ ಮಾಧ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಹ ಸಾಧಕರನ್ನು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡುವ ಹೊಣೆ ಪಾಲಿಕೆ ಮೇಲಿದೆ.
ಜು.9ಕ್ಕೆ ಕೆಂಪೇಗೌಡ ಜಯಂತಿ ಆಚರಣೆ: ಎರಡು ವರ್ಷಕಾಲ ಕೆಂಪೇಗೌಡ ಜಯಂತಿ ದಿನದಂದು ಪಾಲಿಕೆಯ ಕೇಂದ್ರ ಕಚೇರಿ ಮುಂಭಾಗದಲ್ಲಿ ಇರುವ ಕೆಂಪೇಗೌಡ ಪ್ರತಿಮೆ ಮಾಲಾರ್ಪಣೆಗೆ ಜಯಂತಿ ಸೀಮಿತವಾಗಿತ್ತು. ಈ ಬಾರಿಯೂ ಪ್ರತಿಮೆ ಮಾಲಾರ್ಪಣೆಗೆ ಸೀಮಿತವಾಗಿದೆ. ಮೇಯರ್ ಇದ್ದಾಗ ಅವರ ಅನುದಾನದಿಂದ ಕಾರ್ಯಕ್ರಮ ನಡೆಯುತ್ತಿತ್ತು. ಮೇಯರ್ ಇಲ್ಲದಿದ್ದಾಗ ಆಚರಣೆಗೆ ಅನುದಾನ ಕೊರತೆ ಇದೆ ಎಂದು ಪಾಲಿಕೆಯ ಅಧಿಕಾರಿಗಳು ಸಬೂಬು ಹೇಳಿಕೊಂಡು ಬರುತ್ತಿದ್ದಾರೆ. ಇದರ ಬಗ್ಗೆ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೆಂಪೇಗೌಡರ ಜಯಂತಿಯನ್ನು ಕರಗದ ಸಂದರ್ಭದಲ್ಲಿ ಈ ಹಿಂದೆ ಮಾಡಲಾಗುತ್ತಿತ್ತು. ಆದರೆ, ಇತಿಹಾಸ ತಜ್ಞರ ದಾಖಲೆ, ಸಲಹೆ ಮೇರೆಗೆ 2017ರ ನಂತರ ರಾಜ್ಯ ಸರ್ಕಾರ ಪ್ರತಿ ವರ್ಷ ಜೂ.27ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡಲು ತೀರ್ಮಾನಿಸಿ ಆದೇಶ ಹೊರಡಿಸಿತ್ತು. ಆದರೆ, ಸರ್ಕಾರದ ಆದೇಶವನ್ನು ಪಾಲಿಕೆ ಇದುವೆರೆಗ ಪಾಲಿಸಿಕೊಂಡು ಬಂದಿಲ್ಲ. ಈ ಬಾರಿಯೂ ಜು. 9ಕ್ಕೆ ಕೆಂಪೇಗೌಡ ಜಯಂತಿ ಆಚರಿಸಲು ಪಾಲಿಕೆ ಮುಂದಾಗಿದೆ ಎನ್ನಲಾಗಿದೆ.