

ಬೆಂಗಳೂರು: ಕಾಂಗ್ರೆಸ್ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ, ಪ್ರತಿ ಮನೆಗೂ ಮಾಸಿಕ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೆ ಈಗಾಗಲೇ 51 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದು, ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.
ಜುಲೈ ತಿಂಗಳ ಬಿಲ್ಗೆ ಅನ್ವಯಿಸುವಂತೆ ಅಂದರೆ ಆಗಸ್ಟ್ನಲ್ಲಿ ಬರುವ ಬಿಲ್ನಲ್ಲಿ ನೋಂದಾಯಿತ ಗ್ರಾಹಕರು 200 ಯುನಿಟ್ ಒಳಗಿನ ವಿದ್ಯುತ್ ಬಳಸಿದ್ದರೆ ಅವರಿಗೆ ಶೂನ್ಯ ಬಿಲ್ ಬರಲಿದೆ. ಅಂದರೆ ಗೃಹಜ್ಯೋತಿ ಯೋಜನೆಗಾಗಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಕೆಲವರು ತಾವು ಭಾಗ್ಯಜ್ಯೋತಿ, ಕುಟೀರಜ್ಯೋತಿ ಅಥವಾ ಅಮೃತಜ್ಯೋತಿ ಯೋಜನೆಯ ಫಲಾನುಭವಿಗಳು ಎಂದು ಗೃಹಜ್ಯೋತಿಗೆ ಯೋಜನೆಗೆ ನೋಂದಣಿ ಮಾಡಿಸಿಕೊಂಡಿಲ್ಲ ಎಂಬುದು ವಿದ್ಯುತ್ ಸರಬರಾಜು ಕಂಪನಿಗಳ ಗಮನಕ್ಕೆ ಬಂದಿದ್ದು, ಆ ಕುರಿತು ಕಿವಿಮಾತನ್ನು ಹೇಳಿದೆ.
ನೀವು ಈಗಾಗಲೇ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಅಮೃತಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದರೂ ಗೃಹಜ್ಯೋತಿಯ ಪ್ರಯೋಜನ ಪಡೆಯಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ವಿದ್ಯುತ್ ಸರಬರಾಜು ಕಂಪನಿಗಳು ತಿಳಿಸಿವೆ.