ದಂಡಕ್ಕೆ ಹೆದರಿ ಅಂಗಡಿ ಬಂದ್ ಮಾಡಲು ಮುಂದಾದ ಮಾಲೀಕ; ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಜಿಲ್ಲಾಧಿಕಾರಿ ಗರಂ

Fine
Published on

ದಾವಣಗೆರೆ: ಕೋವಿಡ್​ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ ಅಧಿಕಾರಿಗಳು ದಂಡ ವಿಧಿಸುವುದಾಗಿ ಹೇಳಿದಾಗ, ಅದಕ್ಕೆ ಹೆದರಿದ ವರ್ತಕ ಅಂಗಡಿ ಬಾಗಿಲು ಮುಚ್ಚಲು ಮುಂದಾಗಿರುವ ಪ್ರಕರಣ ಕಂಡುಬಂದಿದೆ.

ಕೋವಿಡ್‌ ನಿಯಮ ಪಾಲನೆಗೆ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಗರದಲ್ಲಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕರೊನಾ ಮಾರ್ಗಸೂಚಿ ಪಾಲಿಸದ ವರ್ತಕರ ಮೇಲೆ ಗರಂ ಆಗಿದ್ದಾರೆ. ಹಾಗೆಯೇ ಮಳಿಗೆಯೊಂದರ ಮಾಲೀಕನ ಮೇಲೂ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದಾಗ, ಆತ ದಂಡಕ್ಕೆ ಹೆದರಿ ಅಂಗಡಿ ಬಾಗಿಲು ಮುಚ್ಚಲು ಮುಂದಾಗಿದ್ದಾನೆ.

ದಾವಣಗೆರೆಯ ಕಾಳಿಕಾದೇವಿ ರಸ್ತೆಯ ಜವಳಿ ಅಂಗಡಿಯೊಂದರ ಮಾಲೀಕ ದಂಡ ಕಟ್ಟುವ ಬದಲು ಹೀಗೆ ಅಂಗಡಿ ಶಟರ್ ಎಳೆಸಲು ಮುಂದಾಗಿದ್ದಕ್ಕೆ ಸಿಟ್ಟಾದ ಜಿಲ್ಲಾಧಿಕಾರಿ ಅಂಗಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದಾರೆ. ಅಂಗಡಿಯಲ್ಲಿ ಜನರನ್ನು ನಿಯಂತ್ರಿಸಲು ಆಗುತ್ತಿಲ್ಲ ಎಂದು ಹೀಗೆ ಮಾಡಿದ್ದಾಗಿ ಮಾಲೀಕ ಹೇಳಿದ್ದಾನೆ.

ಆಗ ಮಧ್ಯಪ್ರವೇಶಿಸಿದ ಎಸ್​​ಪಿ ಹನುಮಂತರಾಯ, ಕೋವಿಡ್​ ನಿಯಮಗಳನ್ನು ಪಾಲಿಸಲೇಬೇಕು. ನಿಮಗೆ ಆಗಲಿಲ್ಲ ಎಂದರೆ ನಾವು ಅದಕ್ಕೆ ಬೇಕಾದ ಸಹಕಾರ ನೀಡುತ್ತೇವೆ ಎಂದು ಸಮಾಧಾನ ಪಡಿಸಿದರು. ಕೋವಿಡ್ ನಿಯಮಗಳ ಉಲ್ಲಂಘನೆ ಆಗದಂತೆ ವ್ಯಾಪಾರ ನಡೆಸಿ. ನಿಯಮ ಪಾಲಿಸದಿದ್ದರೆ ದಂಡ ಕಟ್ಟುವುದು ಅನಿವಾರ್ಯ ಎಂದು ಸೂಚನೆ ನೀಡಿ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net