

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆದರೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಇದೀಗ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸರ್ಕಾರಿ ಮೂಲಗಳು ಸ್ಪಷ್ಟನೆ ನೀಡಿವೆ.
ಏಪ್ರಿಲ್ 20ರಿಂದ ಮೇ 3ರವರೆಗೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10ರ ಬದಲಾಗಿ 9 ಗಂಟೆಯಿಂದಲೇ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಬಾರ್, ಎಂಆರ್ಪಿಗಳಲ್ಲಿ ಪಾರ್ಸೆಲ್ ಮಾತ್ರ ಮಾಡಲು ಅವಕಾಶ ನೀಡಲಾಗುವುದು. ಸಿನಿಮಾ ಮಂದಿರಗಳು, ಸ್ವಿಮ್ಮಿಂಗ್ ಪೂಲ್ಗಳು, ಜಿಮ್ಗಳು, ಶಾಪಿಂಗ್ ಮಾಲ್ಗಳನ್ನು ಬಂದ್ ಮಾಡಲಾಗುವುದು. ಈವರೆಗೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಮಾತ್ರ ರಾತ್ರಿ 10ರಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿತ್ತು. ಆದರೆ ನಾಳೆಯಿಂದ ಪ್ರತಿ ಜಿಲ್ಲೆಯಲ್ಲಿ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು. ವಿಧಾನ ಸೌಧದಲ್ಲಿ ಶೇ. 50 ರಷ್ಟು ಸಿಬ್ಬಂದಿ ಮಾತ್ರವೇ ಭಾಗವಹಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಅಗತ್ಯ ಸಿಬ್ಬಂದಿ ಮಾತ್ರವೇ ಕೆಲಸಕ್ಕೆ ಹಾಜರಾಗಬೇಕು. ಮದುವೆ ಕಾರ್ಯಕ್ರಮಗಳಲ್ಲಿ 100 ಜನರಿಗೆ ಇದ್ದ ಅವಕಾಶವನ್ನು 50 ಜನರಿಗೆ ಇಳಿಸಲಾಗಿದೆ ಎಂದು ತಿಳಿಸುವ ಆದೇಶವೊಂದು ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು.
ಆದರೆ ಈ ಸುದ್ದಿ ಸುಳ್ಳು. ಸರ್ಕಾರದಿಂದ ಯಾವುದೇ ಮಾರ್ಗಸೂಚಿ ಬಿಡುಗಡೆಯಾಗಿಲ್ಲ. ವಿಪಕ್ಷ ನಾಯಕರು, ರಾಜ್ಯಪಾಲರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಇದ್ದು ಸಭೆಯ ನಂತರ ಹೊಸ ಮಾರ್ಗಸೂಚಿ ಅಥವ ಹೊಸ ನಿಯಮಾವಳಿಗಳನ್ನು ಹೊರಡಿಸುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
Night Curfew in Karnataka fake news spread