ಬಿಬಿಎಂಪಿ ವ್ಯಾಪ್ತಿಯಲ್ಲಿ 'ಎ' ಖಾತೆ ಅಕ್ರಮ?: ತನಿಖೆಗೆ ಪರಿಶೀಲನಾ ಸಮಿತಿ ನೇಮಕ

Photo of BBMP
Published on

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ‘ಎ‘ ಖಾತೆ ನೀಡಿರುವ ಕುರಿತಂತೆ ಪಟ್ಟಿ ಮಾಡಿ ಮಾ.24ರೊಳಗೆ ವರದಿ ಸಲ್ಲಿಸುವಂತೆ ಎಲ್ಲ 64 ಉಪವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳಿಗೆ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಆದೇಶಿಸಿದ್ದಾರೆ.

‘ಬಿ’ ಖಾತೆಗಳಲ್ಲಿರುವ ಆಸ್ತಿಗಳನ್ನು ಅಕ್ರಮವಾಗಿ ‘ಎ’ ಖಾತೆಗೆ ಸೇರಿಸಲಾಗಿದೆ ಎಂದು ಬಿಜೆಪಿಯ ಮುಖಂಡ ಎನ್.ಆರ್. ರಮೇಶ್ ಅವರು ದೂರನ್ನು ಸಲ್ಲಿಸಿ ಎಲ್ಲ ಅಕ್ರಮ ಎ ಖಾತೆಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತರು ಪರಿಶೀಲನಾ ಸಮಿತಿಯೊಂದನ್ನು ನೇಮಿಸಿ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ.

ಈ ಸಮಿತಿ ಅಕ್ರಮ ಖಾತೆಗೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ವಲಯದ 194ನೇ ವಾರ್ಡಿನಲ್ಲಿ 357, 196ನೇ ವಾರ್ಡಿನಲ್ಲಿ 341 ಅಕ್ರಮವಾಗಿ ‘ಎ’ ಖಾತೆಗಳನ್ನು ನೀಡಿರುವುದು ಪತ್ತೆಯಾಗಿದೆ. ಇದರಿಂದ ಎಲ್ಲ ವಲಯಗಳಲ್ಲೂ ಅಕ್ರಮವಾಗಿ ಎ ಖಾತೆಗಳು ಇರುವ ಸಾಧ್ಯತೆಗಳಿವೆ. ಹೀಗಾಗಿ, ಎಲ್ಲ ಸಹಾಯಕ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಉಪ ವಿಭಾಗಗಳಲ್ಲಿ ಇರಬಹುದಾದ ಅಕ್ರಮ ಎ ಖಾತೆಗಳನ್ನು ಅತಿ ಶೀಘ್ರವಾಗಿ ಪತ್ತೆ ಹಚ್ಚಬೇಕು ಎಂದು ಪತ್ರ ಬರೆದು ಆದೇಶಿಸಿದ್ದಾರೆ.

ಎಲ್ಲ ವಲಯದ ಉಪ ವಿಭಾಗಗಳಲ್ಲಿ ಇರುವ ಎಲ್ಲ ಅಕ್ರಮ ಎ ಖಾತೆಗಳ ವಿವರವನ್ನು ಖಾತೆಯ ಲೆಡ್ಜರ್ ವಿವರ, ಲೆಡ್ಜರ್ ಪುಟ, ಖಾತೆ ಕ್ರಮ ಸಂಖ್ಯೆ, ಸ್ವತ್ತಿನ ವಿಸ್ತೀರ್ಣ, ಖಾತೆದಾರರ ಹೆಸರು ಸೇರಿ ವಿವರ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಕ್ರಿಮಿನಲ್ ಪ್ರಕರಣ: ಸಲ್ಲಿಸಿರುವ ಪಟ್ಟಿಯಲ್ಲಿ ಪರಿಶೀಲನಾ ಸಮಿತಿ ಪರಿಶೀಲನೆ ಮಾಡಲಿದೆ. ಸಲ್ಲಿಸಲಾಗಿರುವ ಪಟ್ಟಿಯಿಂದ ಹೊರಗೆ ಯಾವುದಾದರೂ ಅಕ್ರಮವಾಗಿ ಎ ಖಾತೆ ಲಭಿಸಿದರೂ ಸಹಾಯಕ ಕಂದಾಯ ಅಧಿಕಾರಿ ಮೇಲೆ ಇಲಾಖೆ ಶಿಸ್ತುಕ್ರಮ ಮಾತ್ರವಲ್ಲದೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. ಅಕ್ರಮ ಎ ಖಾತೆಗಳ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗಬಾರದು ಎಂದು ಜಯರಾಮ್ ರಾಯಪುರ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net