ತಾತನ ಮರಣದ ಬೆನ್ನಿಗೇ ಮೊಮ್ಮಗನಿಗೂ ಸಾವು; ಮಾವನ ಕಣ್ಣೆದುರೇ ಪ್ರಜ್ಞೆ ತಪ್ಪಿ ಬಿದ್ದಿದ್ದ 17 ವರ್ಷದ ಹುಡುಗ!

crime scene do not enter ribbon image
Published on

ಬೆಂಗಳೂರು: ಮನೆಗೆ ಊಟ ಪಾರ್ಸೆಲ್ ತರಲು ಹೋಗುತ್ತಿದ್ದಾಗ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಪ್ರಕರಣ ಕಾಟನ್‌ಪೇಟೆಯ ಗೂಡ್ಸ್‌ಶೆಡ್ ರಸ್ತೆಯಲ್ಲಿ ನಡೆದಿದೆ.

ಕಾಟನ್‌ಪೇಟೆಯ ಭಕ್ಷಿಗಾರ್ಡನ್ ನಿವಾಸಿ ಧನುಷ್ (17) ಮೃತ ಸವಾರ. ಹಿಂಬದಿ ಸವಾರ ಹಿತೇಶ್ (16) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶನಿವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಧನುಷ್ ಅವರ ತಾತ ಮೃತಪಟ್ಟಿದ್ದರು. ರಾತ್ರಿ ಮನೆಗೆ ಊಟ ಪಾರ್ಸೆಲ್ ತರುವ ಸಲುವಾಗಿ ಧನುಷ್ ಮತ್ತು ಆತನ ಸ್ನೇಹಿತ ಹಿತೇಶ್ ದ್ವಿಚಕ್ರ ವಾಹನದಲ್ಲಿ ಮೆಜೆಸ್ಟಿಕ್ ಕಡೆಗೆ ಹೊರಟ್ಟಿದ್ದಾರೆ. ಈ ವೇಳೆ ಮಾರ್ಗಮಧ್ಯೆ ಗೂಡ್ಸ್​ಶೆಡ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ವಿಭಜಕಕ್ಕೆ ಅಳವಡಿಸಿರುವ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರವಾಹನ ಸಹಿತ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಸವಾರ ಧನುಷ್‌ಗೆ ಬಲಭಾಗದ ಹಣೆಗೆ ಗಂಭೀರವಾದ ಗಾಯವಾಗಿ ಪ್ರಜ್ಞೆ ತಪ್ಪಿದ್ದಾನೆ. ಹಿಂಬದಿ ಸವಾರ ಹಿತೇಶ್‌ಗೆ ತರಚಿದ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದೇ ಸಮಯಕ್ಕೆ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಧನುಷ್‌ ಮಾವ ಕೂಡಲೇ ಆತನನ್ನು ಆಟೋರಿಕ್ಷಾದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಧನುಷ್ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸ್ವಯಂ ಅಪಘಾತಕ್ಕೆ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net