ನಾನು ಆರ್​ಎಸ್​ಎಸ್​ ಸ್ವಯಂಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ: ಸಿ.ಟಿ. ರವಿ

Untitled-1
Published on

ಚಿಕ್ಕಮಗಳೂರು: ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಸ್ತಾಪದ ಬೆನ್ನಿಗೆ ಉಂಟಾದ ಪರ-ವಿರೋಧ ಅಭಿಪ್ರಾಯ ಬಳಿಕ ಹುಕ್ಕಾ ಬಾರ್​ವರೆಗೂ ತಲುಪಿದ್ದು, ವಾಗ್ವಾದಕ್ಕೆ ನೆಹರೂ ಕೂಡ ವಸ್ತುವಾಗಿದ್ದಾರೆ. ಕಾಂಗ್ರೆಸ್​​ನವರು ಬೇಕಿದ್ದರೆ ಅವರ ಕಚೇರಿಯಲ್ಲೇ ಕ್ಯಾಂಟೀನ್​-ಹುಕ್ಕಾ ಬಾರ್​ ತೆರೆದು ಇಂದಿರಾ-ನೆಹರೂ ಹೆಸರಿಟ್ಟುಕೊಳ್ಳಲಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನಿನ್ನೆ ಹೇಳಿದ್ದಕ್ಕೆ ಕಾಂಗ್ರೆಸ್​​ನಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇಂದು ಅದೇ ವಿಷಯಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸಿ.ಟಿ. ರವಿ, ಹುಕ್ಕಾ ಬಾರ್ ಬಗ್ಗೆ ಮಾತನಾಡಿದ್ದಕ್ಕೆ ಉರಿ ಹೊತ್ತಿಕೊಂಡು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ನೆಹರೂ ಹುಕ್ಕಾ ಸೇದುವ ನೂರಾರು ಫೋಟೋಗಳಿವೆ. ನೆಹರೂ ಹುಕ್ಕಾ ಸೇದುತ್ತಿದ್ದದ್ದು ತಪ್ಪೋ, ರವಿ ಹೇಳಿದ್ದು ತಪ್ಪೋ..? ರವಿ ಹೇಳಿದ್ದು ತಪ್ಪು ಎನ್ನುವುದಾದರೆ ಅವರಿಗೆ ನೆಹರೂ ಬಗ್ಗೆ ಇನ್ನೆಷ್ಟು ಆಕ್ರೋಶ ಇರಬಹುದು ಎಂದು ಸಿ.ಟಿ. ರವಿ ಕಾಂಗ್ರೆಸಿಗರ ಕಾಲೆಳೆದಿದ್ದಾರೆ.

ನೆಹರೂ, ಇಂದಿರಾ ಗಾಂಧಿ ಬಗ್ಗೆ ನಾನು ಮಾತನಾಡಿದ್ದು ತಪ್ಪು ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಅವರು ಇಂದಿರಾ ಗಾಂಧಿಯನ್ನು ಏನೆಂದು ಕರೆದಿದ್ದರು? ಆ ಮಟ್ಟಕ್ಕೆ ಇಳಿದು ನಾನು ಮಾತನಾಡುವುದಿಲ್ಲ. ನನಗೆ ಕುಡಿಯೋ ಅಭ್ಯಾಸ ಇಲ್ಲದಿದ್ದರೂ ಕುಡುಕನ ಪಟ್ಟ ಕಟ್ಟಿದ್ರು. ಆದರೆ, ದಿನಾ ಕುಡಿಯುವವರು ಅವರೇ. ನಾನು 5 ಗಂಟೆಗೆ ಎದ್ದು ಯೋಗ ಮಾಡಿ, ಇಡೀ ದಿನ ಸಕ್ರೀಯವಾಗಿ ಇರುತ್ತೇನೆ. ಅವರ ಹಳೇ ಕಥೆಗಳನ್ನು ಹೇಳಬೇಕಾ? ಎಂದಿರುವ ರವಿ, ನಾನು ಆರ್​ಎಸ್​ಎಸ್​ ಸ್ವಯಂ ಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net