ಉಡುಪಿಯ ಹೆಬ್ರಿ ಕಬ್ಬಿನಾಲೆಯಲ್ಲಿ ANF ಎನ್​ಕೌಂಟರ್​ಗೆ ಮೋಸ್ಟ್​ ವಾಂಟೆಡ್​ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ! Vikram Gowda

Vikram Gowda
Published on

ಉಡುಪಿ: ನಕ್ಸಲ್​ ನಿಗ್ರಹ ಪಡೆ (ಎಎನ್​ಎಫ್​) ಮತ್ತು ನಕ್ಸಲರ ನಡುವೆ ಸೋಮವಾರ (ನ.18) ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಮೋಸ್ಟ್​ ವಾಂಟೆಡ್​ ನಕ್ಸಲ್​ ಮುಖಂಡ ವಿಕ್ರಂ ಗೌಡ ( Vikram Gowda ) ಬಲಿಯಾಗಿದ್ದಾನೆ. ಈ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀತಬೈಲುವಿನಲ್ಲಿ ನಡೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಹೆಬ್ರಿ ಕಾಡಿನ ಸುತ್ತಾಮುತ್ತ ಇತ್ತೀಚೆಗೆ ನಕ್ಸಲರ ಓಡಾಟದ ಬಗ್ಗೆ ಸುಳಿವು ಸಿಕ್ಕಿತ್ತು. ಹೀಗಾಗಿ ತಡಮಾಡದೇ ನಕ್ಸಲ್​ ನಿಗ್ರಹ ಪಡೆ ಹೆಬ್ರಿ ಸುತ್ತಾಮುತ್ತ ಶೋಧ ಕಾರ್ಯಾಚರಣೆ ಆರಂಭಸಿತ್ತು. ಇದರ ನಡುವೆ ಸೋಮವಾರ ತಡರಾತ್ರಿ 5 ಮಂದಿಯ ನಕ್ಸಲರ ಗುಂಪು ಪೀತ ಬೈಲು ಹತ್ತಿರ ಆಹಾರ ಪದಾರ್ಥ ಸಂಗ್ರಹ ಮಾಡಿಕೊಂಡು ಹೋಗಲು ಬಂದಾಗ ಎಎನ್​ಎಫ್​ ತಂಡ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಎಎನ್​ಎಫ್​ ಸಿಬ್ಬಂದಿಯ ಗುಂಡೇಟಿಗೆ ನಕ್ಸಲ್​ ನಾಯಕ ವಿಕ್ರಂ ಗೌಡ ಬಲಿಯಾಗಿದ್ದಾನೆ.

ಐವರಲ್ಲಿ ಇನ್ನುಳಿದ ನಾಲ್ವರು ಕಾಡಿನಲ್ಲಿ ನಾಪತ್ತೆಯಾಗಿದ್ದು, ಅವರಿಗಾಗಿ ಎಎನ್​ಎಫ್​ ಕಾರ್ಯಾಚರಣೆ ಮುಂದುವರಿಸಿದೆ. ಅಕ್ಕಪಕ್ಕದಲ್ಲೇ ಅಡಗಿದ್ದು, ಅವರನ್ನೂ ಬೇಟೆಯಾಡಲು ಎಎನ್​ಎಫ್​ ಹುಡುಕಾಟವನ್ನು ತೀವ್ರಗೊಳಿಸಿದೆ. ಇನ್ನು ಈ ಎನ್​ಕೌಂಟರ್​ನಿಂದ ಉಡುಪಿಯ ಅರಣ್ಯ ಭಾಗದಲ್ಲಿ ಸುಮಾರ 13 ವರ್ಷಗಳ ನಂತರ ಗುಂಡಿನ ಸದ್ದು ಕೇಳಿದಂತಾಗಿದೆ.

ದಟ್ಟಾರಣ್ಯದಿಂದ ಕೂಡಿರುವ ಪೀತಬೈಲಿನಲ್ಲಿ ಕೇವಲ ಮೂರು ಮನೆಗಳಿದ್ದು ಇತ್ತೀಚೆಗೆ ನಕ್ಸಲರ ಓಡಾಟದ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾಗಾಗಿ ಎಎನ್​ಎಫ್​ ತೀವ್ರ ಶೋಧ ನಡೆಸುತ್ತಿದ್ದರು. ನಕ್ಸಲರು ರೇಷನ್ ಸಂಗ್ರಹಕ್ಕೆ ಬರುವ ಖಚಿತ ಮಾಹಿತಿಯನ್ನು ತಿಳಿದು ದಾಳಿ ನಡೆಸಿ, ಪ್ರಮುಖ ನಾಯಕನನ್ನೇ ಹೊಡೆದುರುಳಿಸಿದೆ.

ಕೆಲ ವರ್ಷಗಳ ಹಿಂದೆ ಶೃಂಗೇರಿ ಸಮೀಪದ ಕಿಗ್ಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡನ ಹತ್ಯೆಯಾಗಿದೆ ಎಂಬ ಸುದ್ದಿ ವ್ಯಾಪಕ ಸುದ್ದಿಯಾಗಿತ್ತು. ಆದರೆ, ವಿಕ್ರಂ ಗೌಡನ ಸಂಬಂಧಿಕರೊಬ್ಬರು ಮೃತದೇಹ ಆತನದ್ದಲ್ಲ ಬೇರೆಯವರದು ಎಂದು ಖಚಿತ ಪಡಿಸಿದ್ದರು. ಇದೀಗ ಕೊನೆಗೂ ನಕ್ಸಲ್​ ಮುಖಂಡನ ಹತ್ಯೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net