

Nayanthara : ವಿವಾದದ ನಡುವೆಯೇ ನಿನ್ನೆ (ನ.19) ಲೇಡಿ ಸೂಪರ್ಸ್ಟಾರ್ ನಯನತಾರಾ ಅವರ ಜೀವನಾಧಾರಿತ ಸಾಕ್ಷ್ಯಚಿತ್ರ 'ನಯನತಾರಾ : ಬಿಯಾಂಡ್ ದಿ ಫೇರಿ ಟೇಲ್' ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಮೆಚ್ಚುಗೆಯನ್ನು ಗಳಿಸಿದೆ. ನಿನ್ನೆ 39ನೇ ವಸಂತಕ್ಕೆ ಕಾಲಿಟ್ಟಿರುವ ನಯನತಾರಾಗೆ ಸಾಕ್ಷ್ಯಚಿತ್ರವು ಹುಟ್ಟುಹಬ್ಬದ ಗಿಫ್ಟ್ ಆಗಿದೆ. ಸಾಮಾನ್ಯ ಆ್ಯಂಕರ್ ಆಗಿ ವೃತ್ತಿ ಜೀವನ ಆರಂಭಿಸಿ ಸ್ಟಾರ್ ನಟಿ ಪಟ್ಟಕೇರುವುದರ ನಡುವೆ ನಯನತಾರಾ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಲವ್ ಲೈಫ್ನಲ್ಲೂ ಸಾಕಷ್ಟು ನೋವು ಅನುಭವಿಸಿದ್ದು, ಇದೆಲ್ಲವನ್ನು ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ.
ತಮ್ಮ ಮಾಜಿ ಲವರ್ ಬಗ್ಗೆ ನಯನತಾರಾ ಅವರು ಸಾಕ್ಷ್ಯಚಿತ್ರದಲ್ಲಿ ಮಾತನಾಡಿದ್ದಾರೆ. ಒಟ್ಟಿಗೆ ಬಾಳಲು ಬಯಸಿದರೆ ಸಿನಿಮಾಗಳನ್ನು ಬಿಡುವಂತೆ ತನ್ನ ಮಾಜಿ ಗೆಳೆಯ ಕೇಳಿಕೊಂಡಿದ್ದನ್ನು ಎಂದು ನಯನ ಹೇಳಿದ್ದಾರೆ. ಆ ಮಾಜಿ ಗೆಳೆಯ ಬೇರೆ ಯಾರು ಇಲ್ಲ ಇಂಡಿಯನ್ ಮೈಕಲ್ ಜಾಕ್ಸನ್ ಎಂದು ಖ್ಯಾತಿ ಪಡೆದಿರುವ ಪ್ರಭುದೇವ. ಆದರೆ, ನಯನತಾರಾ ಎಲ್ಲಿಯೂ ಪ್ರಭುದೇವ ಹೆಸರನ್ನು ಬಹಿರಂಗವಾಗಿ ಹೇಳಿಲ್ಲ.
ಮದುವೆಯ ನಂತರ ಸಿನಿಮಾದಿಂದ ದೂರ ಉಳಿಯುವಂತೆ ಹೇಳಿದ್ದರು. ನಾನು ಕೂಡ ಸಿನಿ ಇಂಡಸ್ಟ್ರಿ ತೊರೆಯಲು ನಿರ್ಧರಿಸಿದೆ. ಏಕೆಂದರೆ, ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ಮೊದಲ ಪ್ರೀತಿಯು ವಿಶ್ವಾಸಾರ್ಹ ಸಂಬಂಧವಾಗಿತ್ತು. ನಾನು ಅವನನ್ನು ಪ್ರೀತಿಸಿದಂತೆಯೇ ಆತನು ಕೂಡ ನನ್ನನ್ನು ಪ್ರೀತಿಸುತ್ತಾನೆ ಎಂಬ ನಂಬಿಕೆ ನನ್ನಲ್ಲಿತ್ತು. ಶ್ರೀರಾಮ ರಾಜ್ಯಂ ಚಿತ್ರೀಕರಣ ಮುಗಿದ ನಂತರ ನಾನು ತುಂಬಾ ಅಳುತ್ತಿದ್ದೆ. ನನ್ನ ಇಷ್ಟದ ವೃತ್ತಿಯನ್ನು ಬಿಟ್ಟುಬಿಡಬೇಕೆನ್ನುವ ಚಿಂತೆಯಲ್ಲಿದ್ದೆ. ಆದರೆ, ನಾನೆಂದಿಗೂ ಚಲನಚಿತ್ರಗಳನ್ನು ಬಿಡುವ ಬಗ್ಗೆ ಯೋಚಿಸಿರಲಿಲ್ಲ ಎಂದು ಹೇಳಿದ್ದಾರೆ.
2011 ರಲ್ಲಿ ತೆಲುಗು ಚಿತ್ರ ಶ್ರೀರಾಮ ರಾಜ್ಯಂ ಬಿಡುಗಡೆಯಾದ ನಂತರ ನಯನತಾರಾ ನಟನೆಯನ್ನು ತ್ಯಜಿಸಿ, ಪ್ರಭುದೇವರನ್ನು ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಅದೇ ಸಮಯದಲ್ಲಿ ನಯನತಾರಾ ವಿರುದ್ಧ ಪ್ರಭುದೇವ ಪತ್ನಿ ಹರಿಹಾಯ್ದಿದ್ದರು. ಅಲ್ಲದೆ, ಪ್ರಭುದೇವಗೆ ಡಿವೋರ್ಸ್ ಕೊಡಲು ನಿರಾಕರಿಸಿದ್ದರಿಂದ ಒತ್ತಡ ಹೆಚ್ಚಾಗಿ, ಇಬ್ಬರು ಬೇರೆಯಾಗಬೇಕಾಯಿತು. ಈ ವಿಚಾರವನ್ನು ನಯನತಾರಾ ಸಾಕ್ಷ್ಯಚಿತ್ರದಲ್ಲಿ ಬಹಿರಂಗಪಡಿಸಿದ್ದಾರೆ.
ನಯನತಾರಾ ಅವರ ಜೀವನವನ್ನು ಪರಿಚಯಿಸುವ 'ನಯನತಾರಾ : ಬಿಯಾಂಡ್ ದಿ ಫೇರಿ ಟೇಲ್’ ಹೆಸರಿನ ಸಾಕ್ಷ್ಯಚಿತ್ರವನ್ನು ನೆಟ್ಫ್ಲಿಕ್ಸ್ ಒಟಿಟಿ ವೇದಿಕೆ ನಿನ್ನೆ (ನ.18) ಬಿಡುಗಡೆ ಮಾಡಿದೆ. ಈ ಸಾಕ್ಷ್ಯಚಿತ್ರಕ್ಕಾಗಿ ಧನುಷ್ ನಿರ್ಮಿಸಿದ ನಾನೂಮ್ ರೌಡಿ ಥಾನ್ ಸಿನಿಮಾದ ಕೇವಲ ಮೂರು ಸೆಕೆಂಡುಗಳ ತುಣುಕನ್ನು ಬಳಸಲು ಧನುಷ್ ಅನುಮತಿ ನಿರಾಕರಿಸಿದರು ಮತ್ತು ಎನ್ಒಸಿ ಕೊಡಲಿಲ್ಲ ಎಂದು ನಯನತಾರಾ ಆರೋಪಿಸಿದ್ದಾರೆ. ಟ್ರೈಲರ್ನಲ್ಲಿ ಚಿತ್ರದ ದೃಶ್ಯಗಳಿರುವುದನ್ನು ಕಂಡು 10 ಕೋಟಿ ರೂ. ಪರಿಹಾರಕ್ಕಾಗಿ ಧನುಷ್ ಲೀಗಲ್ ನೋಟಿಸ್ ಕಳುಹಿಸಿದ ಬಳಿಕ ನಯನತಾರಾ ಸುದೀರ್ಘ ಪತ್ರ ಬರೆಯುವ ಮೂಲಕ ಧನುಷ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ನಂತರ ಈ ವಿವಾದ ಬೆಳಕಿಗೆ ಬಂದಿದೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಕೂಡ ಧನುಷ್ ಅವರನ್ನು ಟೀಕಿಸಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ನಾನೂಮ್ ರೌಡಿ ಥಾನ್ ಸಿನಿಮಾದಿಂದ ವಿಘ್ನೇಶ್ ಮತ್ತು ನಯನತಾರಾ ಪ್ರೀತಿಯಲ್ಲಿ ಬಿದ್ದರು. ಈ ಸಿನಿಮಾ ತಮ್ಮ ವೃತ್ತಿ ಜೀವನದಲ್ಲಿಯೇ ದೊಡ್ಡ ಹಿಟ್ ಆಗಿದ್ದು, ಈ ಸಿನಿಮಾದಲ್ಲಿ ಉತ್ತಮ ಹಾಡುಗಳಿವೆ ಎಂದು ನಯನತಾರಾ ಹೇಳಿದ್ದಾರೆ. ಹಾಗಾಗಿಯೇ ಈ ಸಿನಿಮಾಗೆ ಸಂಬಂಧಿಸಿದ ಕಂಟೆಂಟ್ ಬಳಕೆಗೆ ಅನುಮತಿ ನೀಡದ ಧನುಷ್, ನಯನತಾರಾ ಟೀಕೆಗೆ ಗುರಿಯಾಗಿದ್ದಾರೆ.
ತಪ್ಪುಗಳನ್ನು ತಿದ್ದಿಕೊಳ್ಳಲು ಇದೊಂದು ಮುಕ್ತ ಪತ್ರ. ನಿಮ್ಮಂತಹ ಒಳ್ಳೆಯ ನಟ ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಸಿನಿಮಾ ನನ್ನಂಥವರ ಬದುಕಿಗಾಗಿ ಹೋರಾಟ. ಸಿನಿಮಾಕ್ಕೆ ಸಂಬಂಧವೇ ಇಲ್ಲದ ಕುಟುಂಬದಿಂದ ಬಂದು ಸ್ವಯಂ ಹೋರಾಟದಿಂದ ಬದುಕು ಕಟ್ಟಿಕೊಂಡ ಮಹಿಳೆ. ನನ್ನ ಸಾಕ್ಷ್ಯಚಿತ್ರದ ಬಿಡುಗಡೆಯನ್ನು ನಾನು ಮಾತ್ರವಲ್ಲ, ನನ್ನ ಅಭಿಮಾನಿಗಳೂ ನಿರೀಕ್ಷಿಸಿದ್ದರು. ನನ್ನ ಮತ್ತು ನನ್ನ ಸಂಗಾತಿಯ ಮೇಲಿನ ನಿಮ್ಮ ಸೇಡು, ನಮಗೆ ಮಾತ್ರವಲ್ಲ, ಈ ಯೋಜನೆಯಲ್ಲಿ ಕೆಲಸ ಮಾಡಿದ ಜನರ ಮೇಲೂ ಪರಿಣಾಮ ಬೀರುತ್ತದೆ. ಸಾಕ್ಷ್ಯಚಿತ್ರವು ಚಲನಚಿತ್ರಗಳ ಸ್ಮರಣಿಕೆಗಳನ್ನು ಸಹ ಒಳಗೊಂಡಿದೆ, ಪ್ರಮುಖ ಚಲನಚಿತ್ರ ‘ನಾನುಮ್ ರೌಡಿ ಥಾನ್’ ಅನ್ನು ಒಳಗೊಂಡಿದೆ.
ನಿಮ್ಮ NOC ಪಡೆಯಲು ಎರಡು ವರ್ಷಗಳ ದೀರ್ಘ ಕಾದೆ. ಚಿತ್ರದ ಹಾಡುಗಳು ಅಥವಾ ಕೆಲ ದೃಶ್ಯಗಳನ್ನು ಬಳಸಲು ಬಹಳಷ್ಟು ವಿನಂತಿಗಳನ್ನು ಮಾಡಿಕೊಂಡಾಗ ಅನೇಕ ಬಾರಿ ನಿರಾಕರಿಸಲಾಯಿತು. ಇದರಿಂದ ನನಗೆ ತೀವ್ರ ನೋವಾಯಿತು. ನಮ್ಮ ಮೇಲಿನ ವೈಯಕ್ತಿಕ ದ್ವೇಷವನ್ನು ಈಡೇರಿಸಿಕೊಳ್ಳುವುದು ನೋವಿನ ಸಂಗತಿಯಾಗಿದೆ. ಸಾಕ್ಷ್ಯಚಿತ್ರದ ಟ್ರೇಲರ್ ಹೊರಬಂದ ನಂತರ ನಿಮ್ಮ ವಕೀಲರಿಂದ ನೋಟಿಸ್ ನೋಡಿ ಆಘಾತಕ್ಕೊಳಗಾಗಿದ್ದೇನೆ. ಕೇವಲ ಮೂರು ಸೆಕೆಂಡ್ ವಿಡಿಯೋಗೆ ಹತ್ತು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದೀರಿ. ಇದು ನಿಮ್ಮ ಗುಣವನ್ನು ತೋರಿಸುತ್ತದೆ. ನಿಮ್ಮ ಮುಗ್ಧ ಅಭಿಮಾನಿಗಳ ಮುಂದೆ ಆಡಿಯೋ ಲಾಂಚ್‌ಗಳ ವೇದಿಕೆಯಲ್ಲಿ ನೀವು ನಡೆದುಕೊಳ್ಳುವ ಅರ್ಧದಷ್ಟು ಒಳ್ಳೆಯ ವ್ಯಕ್ತಿಯಾಗಿರಲೆಂದು ನಾನು ಬಯಸುತ್ತೇನೆ. ಆದರೆ ನೀವು ಹೇಳುವುದು ಒಂದು ಮತ್ತು ನಡೆದುಕೊಳ್ಳುವ ರೀತಿ ಇನ್ನೊಂದು.
ಸಿನಿಮಾ ಸೆಟ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಜೀವನವನ್ನು ನಿಯಂತ್ರಿಸುವ ನಿರ್ಮಾಪಕ ಸರ್ವಾಧಿಕಾರಿಯಾಗಬಹುದೇ? ನಿಮ್ಮ ನಿರಾಕರಣೆಯನ್ನು ನ್ಯಾಯಾಲಯದಲ್ಲಿ ನೀವು ಸಮರ್ಥಿಸಬಹುದು. ಅದರಲ್ಲಿ ನೈತಿಕ ಅಂಶವೂ ಇದೆ ಎಂದು ನನಗೆ ನೆನಪಿಸುತ್ತದೆ. ಆದರೆ, ದೇವರ ನ್ಯಾಯಾಲಯ ಒಂದಿದೆ. ಒಬ್ಬ ಮುಖವಾಡ ಧರಿಸಿ ಜಗತ್ತಿನ ಮುಂದೆ ನೀಚನಾಗೇ ಉಳಿಯುತ್ತಾನೆ. ಮುಂದಿನ ಆಡಿಯೋ ಲಾಂಚ್‌ಗೆ ಫೇಕ್ ಸ್ಟೋರಿಗಳನ್ನು ಕಟ್ಟಿ ಪಂಚ್ ಲೈನ್‌ಗಳನ್ನು ಸೇರಿಸಿ ಹೇಳುತ್ತೀರಿ. ದೇವರು ಎಲ್ಲವನ್ನು ನೋಡುತ್ತಾನೆ ಎಂಬುದನ್ನು ನೆನಪಿಡಿ ಎಂದು ನಯನತಾರಾ ಪತ್ರವೊಂದನ್ನು ಬರೆದುಕೊಂಡಿದ್ದು, ಇದೀಗ ಕಾಲಿವುಡ್ನಲ್ಲಿ ಈ ವಿವಾದದ ಸದ್ದು ತುಂಬಾ ಜೋರಾಗಿದೆ.
24 ಗಂಟೆಯೊಳಗೆ ವಿಡಿಯೋ ತೆಗೆದುಹಾಕದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ತಮ್ಮ ವಕೀಲರ ಮೂಲಕ ಧನುಷ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಸಾಕ್ಷ್ಯಚಿತ್ರದಲ್ಲಿ ಬಳಸಲಾದ ದೃಶ್ಯಗಳನ್ನು ಫೋನ್‌ಗಳಲ್ಲಿ ಚಿತ್ರೀಕರಿಸಲಾಗಿದೆ ಎಂಬ ನಯನತಾರಾ ಅವರ ವಾದವನ್ನು ಧನುಷ್ ಪರ ವಕೀಲರು ತಳ್ಳಿಹಾಕಿದ್ದಾರೆ. ನನ್ನ ಕಕ್ಷಿದಾರರು ಶೂಟಿಂಗ್ ಸ್ಥಳದಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲು ಯಾರನ್ನೂ ನಿಯೋಜಿಸಿರಲಿಲ್ಲ ಮತ್ತು ನಯನತಾರಾ ಅವರ ಈ ಹಕ್ಕು ನಿರಾಧಾರವಾಗಿದೆ ಎಂದು ವಕೀಲರು ಹೇಳಿದ್ದಾರೆ. ಇಷ್ಟಾದರೂ ಸಾಕ್ಷ್ಯಚಿತ್ರದಲ್ಲಿ ವಿಡಿಯೋಗಳನ್ನು ಬಳಸಿಕೊಳ್ಳಲಾಗಿದ್ದು, ಮುಂದೆ ಈ ವಿವಾದ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)