ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿಶೋ ಎಂದೇ ಪ್ರಸಿದ್ಧಿಯಾಗಿರುವ ‘ಬಿಗ್‌ಬಾಸ್ ಕನ್ನಡ’ದ ಸೀಸನ್ 11 ಯಶಸ್ವಿ 50 ದಿನಗಳನ್ನು ಪೂರೈಸಿದೆ. ನಟ ಸುದೀಪ್ ಈ ಸೀಸನ್ ಬಳಿಕ ಬಿಗ್‌ಬಾಸ್ ನಿರೂಪಣೆಗೆ ವಿದಾಯ ಹೇಳಲಿದ್ದು, ಹೀಗಾಗಿ ಈ ಆವೃತ್ತಿ ವಿಶೇಷ ಪಡೆಯುತ್ತಿದೆ. ಮೊದಲಿಗೆ 16 ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದರು. ಇವರಲ್ಲಿ ಯಮುನಾ ಶ್ರೀನಿಧಿ ದೊಡ್ಮನೆಯಿಂದ ಮೊದಲ ಸ್ಪರ್ಧಿಯಾಗಿ ಹೊರಬಂದಿದ್ದರು. ಈ ನಡುವೆ ಜಗಳ ಆಡಿಕೊಂಡು ಲಾಯರ್ ಜಗದೀಶ್ ಹಾಗೂ ರಂಜಿತ್ ಇಬ್ಬರು ಹೊರಬರಬೇಕಾಯಿತು. ಬಳಿಕ ಹಂಸ, ಮಾನಸಾ ಎಲಿಮಿನೇಟ್ ಆಗಿದ್ದರು. ಕಳೆದ ವಾರ ನಟಿ ಅನುಷಾ ರೈ ಹೊರಬರುವ ಮೂಲಕ ‘ಬಿಗ್‌ಬಾಸ್’ ಜರ್ನಿ ಮುಗಿಸಿದ್ದಾರೆ. ಈ ನಡುವೆ ಆಟಕ್ಕೆ ಸ್ವಲ್ಪ ರೋಚಕತೆ ಸಿಗಲು ವೈಲ್ಡ್ ಕಾರ್ಡ್‌ಗೆ ಅವಕಾಶ ನೀಡಿದ್ದು, ಗಾಯಕ, ಉತ್ತರ ಕರ್ನಾಟಕದ ಜವಾರಿ ಪ್ರತಿಭೆ ಹನುಮಂತು ಎಂಟ್ರಿ ಪಡೆದಿದ್ದರು. ಇದರ ಬೆನ್ನಲ್ಲೆ ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ಕೂಡ ವೈಲ್ಡ್‌ಕಾರ್ಡ್ ಮೂಲಕ ದೊಡ್ಮನೆ ಪ್ರವೇಶಿಸಿದ್ದಾರೆ.
ಹಿಂದಿ ಬಿಗ್‌ಬಾಸ್‌ಗೆ ಲಾಯರ್ ಜಗದೀಶ್: ಬಿಗ್‌ಬಾಸ್-11’ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಹೊರಬಂದ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುತ್ತಾರೆ ಎನ್ನಲಾಗಿತ್ತು. ಆದರೆ, ಅವರು ಹಿಂದಿ ‘ಬಿಗ್‌ಬಾಸ್’ಗೆ ತೆರಳುತ್ತಿದ್ದಾರಂತೆ. ಈ ಬಗ್ಗೆ ಅವರು, ‘ಹೌದು, ನಾನು ಹಿಂದಿ ‘ಬಿಗ್‌ಬಾಸ್’ಗೆ ತೆರಳುತ್ತಿದ್ದೇನೆ. ಈಗಾಗಲೇ ಆಡಿಷನ್ ನಡೆದು ಸೆಲೆಕ್ಟ್ ಕೂಡ ಮಾಡಿದ್ದಾರೆ. ಡೇಟ್ಸ್ ಸಮಸ್ಯೆಯಿಂದಾಗಿ ಪ್ರವೇಶ ವಿಳಂಬವಾಗಿದೆ. ಈ ಶನಿವಾರವೇ ಸಲ್ಮಾನ್ ಖಾನ್ ಸಮ್ಮುಖದಲ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸಲಿದ್ದೇನೆ. ಈಗಾಗಲೇ 60 ದಿನಗಳು ಪೂರ್ಣಗೊಂಡಿದ್ದು, ನಾನು 20 ದಿನ ಇರಬಹುದಷ್ಟೇ. ಆಗ, ‘ಕನ್ನಡ ಬಿಗ್‌ಬಾಸ್’ ಈ ಸೀಸನ್ ಕೊನೆಯ ಹಂತಕ್ಕೆ ತಲುಪಿರುತ್ತದೆ. ಆ ಸಮಯದಲ್ಲಿ ನಾನು ಮತ್ತೊಮ್ಮೆ ಕನ್ನಡದಲ್ಲಿ ಪ್ರವೇಶ ಪಡೆದರೂ ಪಡೆಯಬಹುದು. ಆ ಲೆಕ್ಕಾಚಾರಗಳು ಕೂಡ ಇವೆ’ ಎಂದು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ತೆಲುಗು ಬಿಗ್‌ಬಾಸ್ ಸ್ಪರ್ಧಿ ಕನ್ನಡದಲ್ಲಿ: ಕಿರುತೆರೆ ನಟಿ ಶೋಭಾ ಶೆಟ್ಟಿ, ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಅಲ್ಲದೇ ‘ಬಿಗ್‌ಬಾಸ್ ತೆಲುಗು- ಸೀಸನ್ 7’ರ ಸ್ಪರ್ಧಿಯಾಗಿದ್ದ ಇವರು 14 ವಾರಗಳ ಕಾಲ ಇದ್ದು, ಜನಪ್ರಿಯತೆ ಗಳಿಸಿದ್ದರು. ಇದೀಗ ಕನ್ನಡದ ಬಿಗ್‌ಬಾಸ್ ಮನೆಗೆ ಪದಾರ್ಪಣೆ ಮಾಡಿದ್ದಾರೆ. ಇನ್ನೋರ್ವ ಹೊಸ ಸ್ಪರ್ಧಿ ರಜತ್ ಕಿಶನ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ-2’ನ ರನ್ನರ್-ಅಪ್ ಆಗಿದ್ದರು. ‘ಸೂಪರ್ ಜೋಡಿ’ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.