ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಸುಖಾಂತ್ಯ: ಅಪ್ರಾಪ್ತೆಯ ದುರಂತ ಸಾವಿಗೆ ಕೊನೆಗೂ ಸಿಕ್ಕಿತು ನ್ಯಾಯ!

Girl
Published on

ಹಾವೇರಿ: ಕಳೆದ ಎರಡು ವರ್ಷಗಳ ಹಿಂದೆ ಇಡೀ ರಾಜ್ಯವನ್ನೆ ಬೆಚ್ಚಿಬಿಳಿಸಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ನಡುರಾತ್ರಿಯಲ್ಲಿ ಅಪ್ರಾಪ್ತ ಹುಡುಗಿಯನ್ನು ರೇಪ್​ ಮಾಡಿ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು.

ಸಂತ್ರಸ್ತೆಯ ಸ್ವಂತ ಚಿಕ್ಕಪ್ಪನ ಮಗನೇ ಕೃತ್ಯ ಎಸಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾಮತೃಷೆ ತೀರಿದ ಬಳಿಕ ಬರ್ಬರವಾಗಿ ಕೊಲೆ ಮಾಡಿದ 48 ಗಂಟೆಗಳಲ್ಲೇ ಹಾವೇರಿ ಪೋಲಿಸರು ಆರೋಪಿಯ ಹೆಡಿಮುರಿ ಕಟ್ಟಿದ್ದರು. ಇದೀಗ ಆರೋಪಿಗೆ ಹಾವೇರಿ ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ಮೂಲಕ ಬೆಂಕಿಯಲ್ಲಿ ಬೆಂದು ಹೋಗಿದ್ದ ಅಪ್ರಾಪ್ತೆಯ ಆತ್ಮಕ್ಕೆ ಶಾಂತಿ ಸಿಕ್ಕಿದಂತಾಗಿದೆ.

ಹಾವೇರಿ ಗ್ರಾಮೀಣ ವ್ಯಾಪ್ತಿಯಲ್ಲಿ 2018ರ ಆಗಸ್ಟ್​ 6ರಂದು 17 ವರ್ಷದ ಅಪ್ರಾಪ್ತೆಯ ಬರ್ಬರ ಹತ್ಯೆಯಾಗಿತ್ತು. ತನ್ನ ಕಾಮತೃಷೆ ತೀರಿಸಿಕೊಳ್ಳಲು ಅವಳ ಚಿಕ್ಕಪ್ಪನ ಮಗ ಮಂಜುನಾಥ್ ಪಾಟೀಲ್ ಎಂಬಾತ ಘೋರ ಕೃತ್ಯವೆಸಗಿದ್ದ. ಕೊಲೆಯ ಸಾಕ್ಷಿನಾಶ ಮಾಡಲು ಅದೆಷ್ಟೆ ಯತ್ನಿಸಿದರು ಸಫಲವಾಗದೆ ಹಾವೇರಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದನು. ಈಗ ಹಾವೇರಿ ಸತ್ರ ನ್ಯಾಯಾಲಯ ಕಾಮುಕನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಕೊಲೆ ಮಾಡಿ ಹೇಗೋ ಬಚಾವಾಗಬಲ್ಲೆ ಎಂದು ಆರೋಪಿ ಅನೇಕ ಐಡಿಯಾ ಮಾಡಿದ್ದ. ಕೊನೆಗೆ ವರದಾ ನದಿಯ ಸೇತುವೆ ಕೆಳಗೆ ಅರ್ಧಂಬರ್ದ ಸುಟ್ಟ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಅಷ್ಟರಲ್ಲಾಗಲೇ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಕೈಗೆ ಸಿಕ್ಕಮೇಲೆ ಒಂದೊಂದೆ ಸತ್ಯ ಕಕ್ಕಿದ್ದ. ಘಟನಾ ಸ್ಥಳಕ್ಕೆ ಬಂದಿದ್ದ ಸಂಬಂಧಿಕರಿಗೆ ಕೊಲೆ ಆಗಿದೆ ಎಂದು ಮಾತ್ರ ಗೊತ್ತಿತ್ತು. ಆದರೆ, ಯಾರು ಮಾಡಿದ್ದು ಎಂದು ಯೋಚಿಸುತ್ತಲೆ ತಮ್ಮ ಆಕ್ರಂದನ ಹೊರಹಾಕಿದ್ದರು. ಇದೀಗ ಆರೋಪಿಗೆ ಶಿಕ್ಷೆಯಾಗಿರುವುದು ನ್ಯಾಯ ಸಿಕ್ಕಂತಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net