More

    ನಡುರಸ್ತೆಯಲ್ಲಿ ದಂಡ ವಸೂಲಿಗೆ ತಡೆ: ವಾಹನ ಅಡ್ಡಗಟ್ಟುವುದಕ್ಕೆ ಬ್ರೇಕ್

    ಬೆಂಗಳೂರು: ರಾಜಧಾನಿಯ ರಸ್ತೆಗಳಲ್ಲಿ ವಾಹನಗಳನ್ನು ತಡೆದು ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ಪದ್ಧತಿಗೆ ತಡೆ ನೀಡಿ ಆದೇಶಿಸಿರುವ ಪೊಲೀಸ್ ಇಲಾಖೆ, ಕೇವಲ ಡಿಜಿಟಲ್ ಕೇಸ್ ದಾಖಲಿಸುವಂತೆ ಸೂಚಿಸಿದೆ. ಇದರಿಂದಾಗಿ ನಡುರಸ್ತೆಯಲ್ಲಿ ವಾಹನ ಸವಾರರು ಮತ್ತು ಚಾಲಕರಿಗೆ ಆಗುತ್ತಿದ್ದ ಕಿರಿಕಿರಿಗೆ ಬ್ರೇಕ್ ಬಿದ್ದಂತಾಗಿದೆ.

    ಸಂಚಾರ ಪೊಲೀಸರು ರಸ್ತೆಬದಿ ಅಥವಾ ಮರೆಯಾಗಿ ನಿಂತು ಸಂಚಾರ ನಿಯಮ ಉಲ್ಲಂಘಿಸುವ ಹಾಗೂ ಉಲ್ಲಂಘಿಸದಿದ್ದರೂ ಹಳೆಯ ಉಲ್ಲಂಘನೆ ತಪಾಸಣೆ ನೆಪದಲ್ಲಿ ವಾಹನಗಳನ್ನು ಅಡ್ಡಗಟ್ಟಿ ದಂಡ ವಿಧಿಸುತ್ತಿದ್ದರು. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಜತೆಗೆ ಕರೊನಾ ಸೋಂಕಿನಿಂದ ಸಂಚಾರ ಪೊಲೀಸರನ್ನು ಸುರಕ್ಷಿತ ಮಾಡುವುದು, ದಂಡ ವಸೂಲಿ ವೇಳೆ ಜನರಿಗೆ ಕಿರಿಕಿರಿ ಮತ್ತು ಬಿಲ್ ಕೊಡದೆ ಹಣ ವಸೂಲಿ ಆರೋಪ ಈ ಎಲ್ಲವನ್ನೂ ತಪ್ಪಿಸುವ ಉದ್ದೇಶದಿಂದ ರಸ್ತೆಯಲ್ಲಿ ವಾಹನ ತಡೆದು ದಂಡ ವಸೂಲಿ ಮಾಡುವುದಕ್ಕೆ ಪೊಲೀಸ್ ಇಲಾಖೆ ತಾತ್ಕಾಲಿಕ ತಡೆ ನೀಡಿದೆ.

    ಉಲ್ಲಂಘನೆ ದಂಡ ಬಾಕಿ ಪ್ರಕರಣಗಳಲ್ಲಿ ವಾಹನ ಮಾಲೀಕರ ವಿಳಾಸಕ್ಕೆ ನೋಟಿಸ್ ಕಳುಹಿಸಬೇಕು. ಬಾಕಿ ಇರುವ ಕೇಸ್​ಗಳನ್ನು ಮಾತ್ರ ವಿಲೇವಾರಿ ಮಾಡಬೇಕು ಮತ್ತು ವಾಹನ ಮಾಲೀಕರು ಹಳೇ ಕೇಸಿಗೆ ದಂಡ ಪಾವತಿಗೆ ಬಂದಾಗ ಸ್ವೀಕರಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ.

    ನೋ ಪಾರ್ಕಿಂಗ್​ನಲ್ಲಿ ವಾಹನಗಳ ತೆರವು, ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ಅಥವಾ ನಂಬರ್ ಬರೆದುಕೊಂಡು ಪ್ರಕರಣ ದಾಖಲಿಸುವುದು ಮುಂದುವರಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಡಿಜಿಟಲ್ ಕೇಸ್ ಠಾಣೆಗೆ 25ರ ಗುರಿ!

    ಆಯಾ ಠಾಣಾ ವ್ಯಾಪ್ತಿಯ ವಾಯು ಮಾಲಿನ್ಯ ನಿಯಂತ್ರಣ ತಪಾಸಣಾ ಕೇಂದ್ರಕ್ಕೆ ತಪಾಸಣೆಗೆ ಬರುವ ವಾಹನಗಳ ದಾಖಲೆ ಪರಿಶೀಲನೆ ನಡೆಸಿ ಹಳೇ ಕೇಸ್​ಗಳಿದ್ದರೆ ದಂಡ ವಿಧಿಸಬೇಕು. ಸಂಚಾರ ನಿಯಮ ಉಲ್ಲಂಘಿಸುವ ವಾಹನ ಗಳನ್ನು ಹೆಡ್​ಕಾನ್​ಸ್ಟೆಬಲ್, ಕಾನ್​ಸ್ಟೆಬಲ್​ಗಳು ಅಡ್ಡಗಟ್ಟಿ ನಿಲ್ಲಿಸಬಾರದು. ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿಕೊಳ್ಳಬೇಕು ಮತ್ತು ವಾಹನದ ನೋಂದಣಿ ಸಂಖ್ಯೆ ಬರೆದುಕೊಂಡು ಡಿಜಿಟಲ್ ಯಂತ್ರದಲ್ಲಿ ಕೇಸ್ ದಾಖಲಿಸಬೇಕು. ಕಡ್ಡಾಯವಾಗಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ದಿನಕ್ಕೆ ಕನಿಷ್ಠ ಕೇಸ್​ಗಳನ್ನು 25 ಡಿಜಿಟಲ್ ಯಂತ್ರದಲ್ಲಿ ಕೇಸ್ ದಾಖಲಿಸಬೇಕು ಎಂದು ಹಿರಿಯ ಅಧಿಕಾರಿ ಕಟ್ಟಾಜ್ಞೆ ಮಾಡಿದ್ದಾರೆ.

    ವಿಶೇಷ ಕಾರ್ಯಾಚರಣೆ

    ರಸ್ತೆಬದಿ ಗುಂಪು ಗುಂಪಾಗಿ ಸಂಚಾರ ಪೊಲೀಸರು ತಂಡ ನಿಂತು ವಾಹನ ತಪಾಸಣೆ ನಡೆಸುವ ಪದ್ಧತಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಬದಲಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್​ಟಿಒ) ಹಾಗೂ ವಾಯು ಮಾಲಿನ್ಯ ಪ್ರಮಾಣ ತಪಾಸಣೆಗೆ ಬರುವ ವಾಹನಗಳ ದಾಖಲೆ ಪರಿಶೀಲನೆ ನಡೆಸಿ ಹಳೇ ಕೇಸ್ ಇದ್ದರೆ ದಂಡ ವಿಧಿಸಲಾಗುತ್ತದೆ. ಜತೆಗೆ ವಿಶೇಷ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.

    ಮಧ್ಯಾಹ್ನ 1 ಕ್ಕೆ ಹಾಜರಾತಿ

    ಠಾಣೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ಸಾಮಾನ್ಯ ಹಾಜರಾತಿ ಇರಬೇಕು. ಮಾಹಿತಿ ಸ್ವೀಕರಿಸಿ ವಾಟ್ಸ್​ಆಪ್ ಗ್ರೂಪ್​ನಲ್ಲಿ ಅಪ್​ಡೇಟ್ ಮಾಡಬೇಕು.

    ನಗರದಲ್ಲಿ ಸಂಚಾರ ಸುಗಮ

    ರಸ್ತೆಯಲ್ಲಿ ದಂಡ ವಿಧಿಸುವ ಪದ್ಧತಿಯನ್ನು ರದ್ದು ಮಾಡಿ ಕೇವಲ ಡಿಜಿಟಲ್ ಪದ್ಧತಿ ಜಾರಿಗೆ ತಂದರೆ ಕೆಲ ಸಿಬ್ಬಂದಿ ಬಿಲ್ ಕೊಡದೆ ಹಣ ಪಡೆಯುವುದು ತಪು್ಪತ್ತದೆ. ಸಂಚಾರ ನಿಯಂತ್ರಣ, ವಾಹನ ದಟ್ಟಣೆ ಪ್ರದೇಶಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದರೆ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಹೆಚ್ಚು ಸಹಕಾರಿಯಾಗಲಿದೆ ಎಂಬುದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts