

ಬೆಂಗಳೂರು: ನಮ್ಮ ಹತ್ರ ದೀಪ ಇದೆ ಅಂತಾ ಮುತ್ತು ಕೊಡೋದಕ್ಕೆ ಆಗುತ್ತಾ? ಮುತ್ತು ಕೊಟ್ಟರೆ ನಮ್ಮ ತುಟಿಯೇ ಸುಡುತ್ತೆ ಎಂದು ಸರ್ಕಾರದ ಬಗ್ಗೆಯೇ ಬಿಜೆಪಿ ಶಾಸಕರೊಬ್ಬರು ವ್ಯಂಗ್ಯವಾಡಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಬುಧವಾರ ನೇಕಾರರ ಸಮಸ್ಯೆ ವಿಷಯ ಪ್ರಸ್ತಾಪಿಸಿದ ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ, ದೀಪದ ಕೆಳಗೆ ಇದ್ದೀವಿ. ನಮ್ಮದೇ ಸರ್ಕಾರ ಇದೆ, ದೀಪ ನಮ್ಮದೇ.. ನಮ್ಮ ಹತ್ರ ದೀಪ ಇದೆ ಅಂತಾ ಮುತ್ತು ಕೊಡೋದಕ್ಕೆ ಆಗುತ್ತಾ? ಮುತ್ತು ಕೊಟ್ಟರೆ ನಮ್ಮ ತುಟಿ ಸುಡುತ್ತೆ ಎಂದು ಛೇಡಿಸಿದರು. ಇದನ್ನೂ ಓದಿರಿ ಸಿಡಿ ಕೇಸ್: ಹೆಗಲು ಮುಟ್ಟಿ ನೋಡಿಕೊಂಡದ್ದಕ್ಕೂ ಈ ಫೋಟೋಗೂ ಸಂಬಂಧವಿದೆಯಾ?
ನೇಕಾರರು ಸಿದ್ಧಪಡಿಸಿದ ಸೀರೆಗಳು ಖರೀದಿ ಆಗ್ತಿಲ್ಲ, ಅಧಿಕಾರಿಗಳು ಏನೂ ಮಾಡಲ್ಲ. ನೇಕಾರರ ಸಮಸ್ಯೆಗೆ ಸರ್ಕಾರ ಸ್ಪಂದನೆ ಮಾಡಬೇಕಿತ್ತು. ಆದರೆ, ಆ ಕೆಲಸ ಆಗಿಲ್ಲ. ನಾವು ಆಡಳಿತ ಪಕ್ಷದ ಶಾಸಕರಿರಬಹುದು. ಹಾಗೆಂದು ಸುಮ್ಮನಿರಲು ಸಾಧ್ಯವೇ? ವ್ಯವಸ್ಥೆ ಸರಿಯಾಗಬೇಕು ಎಂದು ಶಾಸಕ ದೊಡ್ಡನಗೌಡ ಆಗ್ರಹಿಸಿದರು.
ಈ ವೇಳೆ ಆಡಳಿತ ಪಕ್ಷದವರೇ ವಿಪಕ್ಷ ಶಾಸಕರ ರೀತಿ ಚರ್ಚೆ ಮಾಡ್ತೀರಾ ಎಂದು ಉಪಸಭಾಧ್ಯಕ್ಷ ಆನಂದ್ ಮಾಮನಿ ಹೇಳಿದರು. ಇದಕ್ಕೆ ಉತ್ತರಿಸಿದ ದೊಡ್ಡನಗೌಡ, ಸರ್ಕಾರದಲ್ಲೂ ತಪ್ಪಿದ್ರೆ ಹೇಳಬೇಕು. ನಮ್ಮನೆ ದೀಪ ಎಂದು ದೀಪಕ್ಕೆ ಮುತ್ತುಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.