

ಬೆಂಗಳೂರು: ಮನೆ ಯಜಮಾನಿಗೆ ಮಾಸಿಕ 2,000 ರೂ ಭತ್ಯೆ ನೀಡುವ ಗೃಹಲಕ್ಷ್ಮೀ ಯೋಜನೆಗೆ ಶುಕ್ರವಾರ ಮಧ್ಯಾಹ್ನ 1.30 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಯೋಜನೆಯಡಿ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಕಾಲಮಿತಿ ವಿಧಿಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿಭವನದಲ್ಲಿ ಸಾಂಕೇತಿಕವಾಗಿ ಐವರ ಫಲಾನುಭವಿಗಳ ಅರ್ಜಿ ಸಲ್ಲಿಕೆ ಮೂಲಕ ಸೇವಾ ಸಿಂಧು ಜಾಲತಾಣಕ್ಕೆ ಚಾಲನೆ ನೀಡಲಿದ್ದಾರೆ.
ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿದವರು ಯೋಜನೆಗೆ ಅರ್ಹರು. ಅರ್ಜಿದಾರರ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅರ್ಜಿ ತಿರಸ್ಕೃತವಾಗಲಿದೆ. ಇ-ಗವರ್ನೆನ್ಸ್ ಮೂಲಕ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡಿದ್ದು, ಅರ್ಜಿ ಸಲ್ಲಿಸುವ ವೇಳೆ ಮೊಬೈಲ್ ನಂಬರ್ ಜೋಡಣೆಯಾದ ಆಧಾರ್ ಸಂಖ್ಯೆಯನ್ನು ನೀಡಬೇಕು. ಯಾವುದೇ ಗೊಂದಲವಿದ್ದರೆ ಸಹಾಯವಾಣಿ ಸಂಖ್ಯೆ 1902ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.