

ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜೂ.14ರಂದು ಮಠದ ಗೋಶಾಲೆಯಲ್ಲಿ ಹಲಸಿನ ಮರ ಏರಿದ್ದಾರೆ. ಗೋಶಾಲೆಗೆ ಭೇಟಿ ನೀಡಿದ ಸಂದರ್ಭ, ಅಲ್ಲೇ ಇದ್ದ ಮರದಲ್ಲಿ ಹಲಸಿನ ಹಣ್ಣುಗಳನ್ನು ಕಂಡ ಅವರು, ಶಲ್ಯ ತಲೆಗೆ ಸುತ್ತಿ, ಕೈಯಲ್ಲೊಂದು ಕತ್ತಿ ಹಿಡಿದು ಮೂವತ್ತು ಅಡಿ ಎತ್ತರವಿರುವ ಮರವನ್ನು ನಿರಾಯಾಸವಾಗಿ ಏರಿದರು. ಸುಮಾರು 10 ಹಲಸಿನ ಹಣ್ಣುಗಳನ್ನು ಕೊಯ್ದು, ಹಸುಗಳಿಗೆ ನೀಡಿದರು.
ಲೋಕ ಸಂಚರಿಸುತ್ತಾ ಧರ್ಮ ಜಾಗೃತಿ ಮೂಡಿಸುತ್ತಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಇದೀಗ ಪೇಜಾವರ ಶ್ರೀ ಹಲಸಿನ ಮರವೇರಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕೆಲ ವರ್ಷಗಳ ಹಿಂದೆ ಬ್ರಹ್ಮಾವರ ತಾಲೂಕಿನ ನೀಲಾವರ ಗೋಶಾಲೆಯ ಆವರಣದಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ಈ ವೇಳೆ ಹಾವನ್ನು ಸರಳವಾಗಿ ಹಿಡಿಯುವ ವಿಧಾನ ವಿವರಿಸಿ, ಪ್ರಾತ್ಯಕ್ಷಿಕೆ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಪೇಜಾವರಶ್ರೀ ಸುಲಲಿತವಾಗಿ ತೆಂಗಿನ ಮರದ ಗರಿಯ ಕಡ್ಡಿಯಲ್ಲಿ ಹಾವು ಹಿಡಿಯುವ ಪ್ರಕ್ರಿಯೆ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.