ಕಾಶಿಯಾತ್ರೆಗೆ ಅಂತಿಮ ಮಾರ್ಗಸೂಚಿ ಪ್ರಕಟ; ಏನೇನು ನಿಯಮ? ಇಲ್ಲಿದೆ ವಿವರ..

kashi
Published on

ಬೆಂಗಳೂರು: ಬಹುನಿರೀಕ್ಷಿತ ಕಾಶಿಯಾತ್ರೆ ಕುರಿತು ಸರ್ಕಾರ ಅಂತಿಮ ಮಾರ್ಗಸೂಚಿ ಹೊರಡಿಸಿದ್ದು, ಆ ಬಗ್ಗೆ ಅಧಿಕೃತ ಆದೇಶವನ್ನೂ ಮಾಡಿದೆ. ಕಾಶಿಯಾತ್ರೆಯು ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಕಾಶಿ ಕಾರೀಡಾರ್​​ಗೆ ರಾಜ್ಯದ ಜನರು ಭೇಟಿ ನೀಡುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಾರ್ಗಸೂಚಿಗಳನ್ನು ಅಂತಿಮಗೊಳಿಸಿ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಕಾಶಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ಮುತುವರ್ಜಿಯಿಂದ ಅಭಿವೃದ್ದಿಗೊಳಿಸಲಾಗಿದೆ. ಈ ಭವ್ಯ ಕಾಶಿಯ ಯಾತ್ರೆ ಬಹಳಷ್ಟು ಜನರ ಜೀವನದ ಅಭಿಲಾಷೆಯಾಗಿರುತ್ತದೆ. ಅದನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಯೋಜನೆ ಪ್ರಾರಂಭಿಸಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಆಯವ್ಯಯದಲ್ಲಿ ಘೋಷಣೆ ಮಾಡಿದ್ದರು.

ಅದರಂತೆ ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿಯಂತೆ ಸಹಾಯಧನ ನೀಡುವ ಯೋಜನೆಗೆ ಮಾರ್ಗಸೂಚಿಗಳನ್ನು ಇಂದು ಅಂತಿಮಗೊಳಿಸಿದ್ದು, ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಏಪ್ರಿಲ್‌ 1, 2022ಕ್ಕೆ ಪೂರ್ವಾನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದ್ದು, ಸೂಕ್ತ ದಾಖಲಾತಿಗಳೊಂದಿಗೆ ಜನರು ಇದರ ಸದುಪಯೋಗ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

Koo App
ಕರ್ನಾಟಕದಿಂದ ಭವ್ಯ ಕಾಶಿಗೆ ತೆರಳುವ ಯಾತ್ರಾರ್ಥಿಗಳಿಗೆ, ರಾಜ್ಯ ಸರ್ಕಾರದಿಂದ 5000 ರೂ. ಗಳ ಸಹಾಯಧನ ನೀಡಲಾಗುವುದು. ನಮ್ಮ ದೇಶ, ನಮ್ಮ ಪರಂಪರೆ, ನಮ್ಮ ಹೆಮ್ಮೆ! #BhavyaKashi @CMOKarnataka
View attached media content
-Araga Jnanendra (@aragajnanendra)28 June 2022

ಮಾರ್ಗಸೂಚಿಯ ಅಂಶಗಳು

1. ಕರ್ನಾಟಕದಿಂದ ಕಾಶಿಯಾತ್ರೆ ಕೈಗೊಂಡ ಅರ್ಹ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗುವುದು.

2. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಈ ಉದ್ದೇಶಕ್ಕಾಗಿ ಕೆಳಕಂಡ ಯಾವುದಾದರೂ ಒಂದು ದಾಖಲೆ ಕಡ್ಡಾಯವಾಗಿ ಒದಗಿಸತಕ್ಕದ್ದು.
- ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನೀಡಿರುವ "ಗುರುತಿನ ಚೀಟಿ
- ಆಧಾರ್‌ ಗುರುತಿನ ಚೀಟಿ
- ಪಡಿತರ ಚೀಟಿ

3. ಕರ್ನಾಟಕದಿಂದ ಕಾಶಿಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಅಂದರೆ ಏಪ್ರಿಲ್‌ 1ಕ್ಕೆ 18 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು, ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆ ಹಾಜರುಪಡಿಸುವುದು,

4. ಇದೇ ಏ. 01ರಿಂದ ಜೂ. 30ರ ವರೆಗೆ ಕಾಶಿ ಶ್ರೀ ವಿಶ್ವನಾಥ ಸ್ವಾಮಿಯ ದರ್ಶನಕ್ಕೆ ತೆರಳಿದ ಯಾತ್ರಾರ್ಥಿಗಳು ಸಂಬಂಧಿಸಿದ ದಾಖಲಾತಿ (ಕಾಶಿ ಶ್ರೀ ವಿಶ್ವನಾಥ ಸ್ವಾಮಿ ದೇವಾಲಯಕ್ಕೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಮತ್ತು ಹಿಂದಿರುಗಿದ ಬಗ್ಗೆ ಕಾಯ್ದಿರಿಸಿದ ಟಿಕೇಟ್, ಛಾಯಾಚಿತ್ರ ಪೂಜಾ ರಶೀದಿ ಅಥವಾ ದೇವಾಲಯಕ್ಕೆ ತೆರಳಿ ಮರಳಿದ ಬಗ್ಗೆ ಯಾವುದಾದರೂ ಇತರೆ ದಾಖಲೆ)ಗಳನ್ನು ಮುದ್ದಾಂ ಆಗಿ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಇವರ ಕಚೇರಿಗೆ ಸಲ್ಲಿಸತಕ್ಕದ್ದು.

5. 2022ರ ಜು. 1ಕ್ಕೆ ಅನ್ವಯವಾಗುವಂತೆ ಯಾತ್ರಾರ್ಥಿಗಳು ಕಾಶಿ ಯಾತ್ರೆ ಕೈಗೊಂಡಿರುವ ಬಗ್ಗೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಛತ್ರ, ವಾರಾಣಸಿ ಇವರ ಕಚೇರಿಯಿಂದ ಬಯೋಮೆಟ್ರಿಕ್‌ ದೃಢೀಕರಣದೊಂದಿಗೆ, ಆನ್‌ಲೈನ್‌ ಅಥವಾ ಮುದ್ದಾಂ/ನೋಂದಾಯಿತ ಅಂಚೆ ಮೂಲಕ, ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಕಛೇರಿಗೆ ಸಲ್ಲಿಸತಕ್ಕದ್ದು. ಒಂದು ವೇಳೆ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಛತ್ರ, ವಾರಣಾಸಿ ಇವರ ದೃಢೀಕರಣ ಇಲ್ಲದಿದ್ದಲ್ಲಿ ಅಂಥ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

6. ಯಾತ್ರಾರ್ಥಿಗಳಿಗೆ ಒಮ್ಮೆ ಮಾತ್ರ ಸಹಾಯಧನ ಪಡೆಯಲು ಅವಕಾಶ.

7. ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳ ಬ್ಯಾಂಕ್‌ ಖಾತೆ ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಾಗಿರಬೇಕು ಮತ್ತು ಕಡ್ಡಾಯವಾಗಿ ಆಧಾರ್​ಗೆ ಲಿಂಕ್‌ ಆಗಿರತಕ್ಕದ್ದು,

8. ಸದರಿ ಸಹಾಯಧನವನ್ನು ಯಾತ್ರೆಯನ್ನು ಪೂರ್ಣಗೊಳಿಸಿ ಸಂಬಂಧಿಸಿದ ದಾಖಲೆಗಳನ್ನು ನಿಗದಿತ ನಮೂನೆ ಅರ್ಜಿಯನ್ನು ಭರ್ತಿ ಮಾಡಿ ಒದಗಿಸಿದ ನಂತರ ಅವುಗಳನ್ನು ಧಾರ್ಮಿಕ ದತ್ತಿ ಆಯುಕ್ತರು ಸ್ವೀಕರಿಸಿ, ಪರಿಶೀಲಿಸಿ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದು.

“ಭಾರತ್‌ ಗೌರವ್‌” ಯೋಜನೆಯಡಿ ಕಾಶಿಯಾತ್ರೆಗೆ ವಿಶೇಷ ರೈಲು

ಕೇಂದ್ರ ಸರ್ಕಾರದ “ಭಾರತ ಗೌರವ” ಯೋಜನೆಯಡಿ ಮುಜರಾಯಿ ಇಲಾಖೆ ರೈಲ್ವೇ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಾಶಿಗೆ ವಿಶೇಷ ರೈಲಿನ ಕಾರ್ಯಾಚರಣೆ ಸದ್ಯದಲ್ಲೇ ಪ್ರಾರಂಭಿಸಲು ಸಿದ್ಧತೆಗಳನ್ನು ಭರದಿಂದ ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೇ ಇಲಾಖೆಯಲ್ಲಿ ನೊಂದಣಿ ಮಾಡಿಸಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net