

ಬೆಂಗಳೂರು: ಎರಡನೇ ಮಗು ಕೂಡ ಹೆಣ್ಣು ಎಂಬ ಬೇಸರಕ್ಕೆ ಒಳಗಾದ ತಂದೆ, ತನ್ನ ಮೊದಲ ಮಗಳು, ಐದು ವರ್ಷದ ಬಾಲಕಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಬಗ್ಗೆ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತೆಲಂಗಾಣದ ಪ್ರಕಾಶಂ ಜಿಲ್ಲೆಯ ವೆಂಕಟೇಶ್ವರ ರಾವ್ ಬಂಧಿತ ತಂದೆ. ಆತನ ಪತ್ನಿ ಬೆಂಗಳೂರಿನ ನಯನ ಎಂಬಾಕೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಎಚ್ಎಎಲ್ ಪ್ರದೇಶದ ರೆಡ್ಡಿಪಾಳ್ಯದ ನಿವಾಸಿ ನಯನ ಹಾಗೂ ಖಾಸಗಿ ಕಂಪನಿಯ ಉದ್ಯೋಗಿ ವೆಂಕಟೇಶ್ ರಾವ್ 2016ರಲ್ಲಿ ಮದುವೆಯಾಗಿದ್ದರು. ಇವರಿಗೆ ಐದು ವರ್ಷದ ಮಗಳಿದ್ದು, ಹತ್ತು ದಿನಗಳ ಹಿಂದಷ್ಟೇ ಮತ್ತೆ ಹೆರಿಗೆಯಾಗಿದ್ದು, ಎರಡನೇ ಮಗು ಕೂಡ ಹೆಣ್ಣೇ ಹುಟ್ಟಿತ್ತು.
ಹೆಂಡತಿಯ ಮನೆಗೆ ಮಗುವನ್ನು ನೋಡಲು ಬಂದಿದ್ದ ವೆಂಕಟೇಶ್ವರ ರಾವ್, ಎರಡನೇ ಮಗು ಕೂಡ ಹೆಣ್ಣೇ ಹುಟ್ಟಿದ್ದ ಹಿನ್ನೆಲೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿದ್ದ. ಮಾತಿಗೆ ಮಾತು ವಿಕೋಪಕ್ಕೆ ತೆರಳಿದಾಗ ಆತ ತನ್ನ ಮೊದಲನೇ ಮಗಳನ್ನು ಕುತ್ತಿಗೆ ಹಿಸುಕಿ ಸಾಯಿಸಲು ಮುಂದಾಗಿದ್ದ. ಹೀಗಾಗಿ ನಯನ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.