

ಮಂಗಳೂರು: ಪರ್ಸೆಂಟೇಜ್ ಆರೋಪ, ಪಠ್ಯಪರಿಷ್ಕರಣೆ ವಿವಾದ ಇತ್ಯಾದಿಗಳಲ್ಲಿ ಸಿಲುಕಿರುವ ರಾಜ್ಯ ಬಿಜೆಪಿಗೆ ಮತ್ತೊಂದು ಮುಜುಗರದ ಸನ್ನಿವೇಶ ಎದುರಾಗಿದೆ. ರಾಜ್ಯ ಬಿಜೆಪಿ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ಸರ್ಕಾರದ ಸವಲತ್ತು ಕೂಡ ಹಿಂದಿರುಗಿಸಿ ದನಿ ಎತ್ತಿದ್ದಾರೆ.
ಗನ್ಮ್ಯಾನ್ ಸೌಲಭ್ಯ, ಸರ್ಕಾರದ ಸವಲತ್ತು ಹಿಂದಿರುಗಿಸಿರುವುದಾಗಿ ಹೇಳಿರುವ ಅವರು ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ವಕ್ಫ್ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮೌನ ವಹಿಸಿದೆ ಎಂದಿರುವ ಅವರು, ಈ ಹಗರಣದ ಕುರಿತಂತೆ ಬಿಜೆಪಿ ಮುಖಂಡರು ಆಮಿಷವೊಡ್ಡಿರುವುದಾಗಿಯೂ ಹೇಳಿದ್ದಾರೆ.
ವಕ್ಫ್ ಹಗರಣದ ಕುರಿತು ರಾಜ್ಯ ಸರ್ಕಾರ ಮೃದು ಧೋರಣೆ ತಳೆದಿದೆ. ಹಗರಣದ ವರದಿ ನೀಡಿದರೂ ಸರ್ಕಾರದಿಂದ ಅಸಹಕಾರ ತೋರುತ್ತಿದೆ. ಅಲ್ಲದೆ ವಕ್ಫ್ ಹಗರಣದ ತನಿಖೆಯಿಂದ ದೂರ ನಿಲ್ಲುವಂತೆ ಬಿಜೆಪಿ ಮುಖಂಡರಿಂದಲೇ ಆಫರ್ ಬಂದಿದೆ ಎಂಬ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಜತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಸ್ಲಿಮರಿಗೆ ಅಭದ್ರತೆ ಕಾಡುತ್ತಿದೆ, ಸರ್ಕಾರ ಹಲವು ನೀತಿಗಳ ಮೂಲಕ ಮುಸ್ಲಿಮರ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದೂ ಹೇಳಿರುವ ಅವರು, ಬಿಜೆಪಿಯಲ್ಲೇ ಇದ್ದು, ಬಿಜೆಪಿ ವಿಚಾರಗಳ ಬಗ್ಗೆ ಧ್ವನಿ ಎತ್ತಲಿದ್ದೇನೆ ಎಂದಿದ್ದಾರೆ.