

ತುಮಕೂರು: ಜಿಲ್ಲಾ ಕಾಂಗ್ರೆಸ್ ಕಚೇರಿ ಸಮೀಪ ಗ್ಯಾಸ್‌ಪೈಪ್‌ಲೈನ್ ಒಡೆದು ಅನಿಲ ಸೋರಿಕೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ಸಂಚಾರ ಪೊಲೀಸ್ ಪೇದೆಯೊಬ್ಬರ ಸಮಯಪ್ರಜ್ಞೆಯಿಂದ ತಪ್ಪಿದೆ!
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದ ಬಿ.ಹೆಚ್.ರಸ್ತೆಯ ಸ್ಟೆಪ್ ಅಪ್ ಬಳಿ ಮೆಗಾಗ್ಯಾಸ್ ಪೈಪ್‌ಲೈನ್ ಹಾದು ಹೋಗಿದ್ದು, ಮಂಗಳವಾರ ಬೆಳಗ್ಗೆ ಸ್ಮಾರ್ಟ್‌ಸಿಟಿಗೆ ಸಂಬಂಧಿಸಿದ ಕಾಮಗಾರಿಯಲ್ಲಿ ತೊಡಗಿದ್ದ ಜೆಸಿಬಿ ಚಾಲಕ ಗ್ಯಾಸ್ ಪೈಪ್‌ಲೈನ್ ಗಮನಿಸಿದೆ ಅಗೆದ ಪರಿಣಾಮ ಪೈಪ್ ಒಡೆದು ಅನಿಲ ಸೋರಿಕೆಯಾಗಿದೆ. ಭೂಮಿಯೊಳಗಿಂದ ಗ್ಯಾಸ್ ಬರುತ್ತಿರುವುದನ್ನು ಕಂಡು ಗಾಬರಿಗೊಂಡ ಜೆಸಿಬಿ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಅನಿಲ ಸೋರುತ್ತಿರುವುದನ್ನ ಗಮನಿಸಿ ಅಲ್ಲೇ ಸಮೀಪದ ಭದ್ರಂ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಪೇದೆ ರಂಗಸ್ವಾಮಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೇದೆ ರಂಗಸ್ವಾಮಿ, ಗ್ಯಾಸ್ ಸೋರಿಕೆಯಾಗುತ್ತಿರುವುದನ್ನು ನೋಡಿ ಅಗ್ನಿಶಾಮಕ ಠಾಣೆ, ಪೊಲೀಸ್ ಕಂಟ್ರೋಲ್ ರೂಂ ಹಾಗೂ ಸಂಬಂಧಪಟ್ಟ ಗ್ಯಾಸ್ ಪೈಪ್‌ಲೈನ್ ಅಳವಡಿಕೆದಾರರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮೆಗಾಗ್ಯಾಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಿದ್ದು ಮುಂದಾಗಬಹುದಾಗಿದ್ದ ಹೆಚ್ಚಿನ ಅನಾಹುತ ತಡೆದಿದ್ದಾರೆ.
ಈ ಹಿಂದೆಯೂ ಒಮ್ಮೆ ರಿಂಗ್ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ಕೆಲಸ ಮಾಡುತ್ತಿದ್ದ ವೇಳೆ ಇದೇ ರೀತಿ ಗ್ಯಾಸ್‌ಲೈನ್ ಒಡೆದು ಬೆಂಕಿ ಹೊರ ಹೊಮ್ಮಿತ್ತು. ಆ ಸಂದರ್ಭದಲ್ಲೂ ತಕ್ಷಣ ಕಾರ್ಯಪ್ರವೃತ್ತರಾದ್ದರಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಪಂಚಾಕ್ಷರಿ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.