ನಾನು ಜನರ ಪ್ರೀತಿಯ ಬಂಧನದಲ್ಲಿರುವೆ, ವದಂತಿ ಹಬ್ಬಿಸಿ ಮನಸ್ಸಿಗೆ ನೋವುಕೊಡಬೇಡಿ...

rameshkumar
rameshkumar
Published on

ಕೋಲಾರ: ನನ್ನ ರಾಜಕೀಯ ನಿವೃತ್ತಿ ಕೇವಲ ವದಂತಿ ಅಷ್ಟೆ. ಜನರು ನನ್ನ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾರೆ, ಅವರಿಗೆ ಜವಾಬ್ದಾರಿ ಕೊಟ್ಟು ಆಮೇಲೆ ನಿವೃತ್ತಿಯಾಗುವೆ ಎಂದು ಮಾಜಿ ಸ್ಪೀಕರ್ ಕೆ.ಆರ್​. ರಮೇಶ್ ಕುಮಾರ್ ಹೇಳಿದರು.

ನಿವೃತ್ತಿಯಾಗಲು ಫ್ರೀಯಾಗಿರುವ ಮನುಷ್ಯ ನಾನಲ್ಲ‌. ಜನರ ಪ್ರೀತಿಯ ಬಂಧನದಲ್ಲಿದ್ದೇನೆ, ಇಲ್ಲಸಲ್ಲದ ವದಂತಿ ಹಬ್ಬಿಸಿದರೆ ಮನಸ್ಸಿಗೆ ನೋವಾಗುತ್ತೆ ಎಂದ ರಮೇಶ್​ ಕುಮಾರ್​, ನಾನು ಸರ್ಕಾರಿ ಸೇವೆಯಲ್ಲಿದ್ದರೆ ವಿಆರ್​ಎಸ್ ಕೊಡಬಹುದು. ನನ್ನ ರಾಜಕೀಯ ನಿವೃತ್ತಿ ಬಗ್ಗೆ ನಾನೆಲ್ಲೂ ಹೇಳಿಕೆ ಕೊಟ್ಟಿಲ್ಲ. ಯಾವುದೇ ಹೇಳಿಕೆ ಇಲ್ಲದೆ, ದಾಖಲೆ ಇಲ್ಲದೆ ನಮಗೆ ಮುಜುಗರ ತರುವ ಕೆಲಸ ಮಾಡಬೇಡಿ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯದಲ್ಲಿ ತೊಡಗಿರುವ ಕಾಂಗ್ರೆಸ್​ನ ಹಿರಿಯ ರಾಜಕಾರಣಿ ರಮೇಶ್​ಕುಮಾರ್, 'ನಾನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಸಕ್ರಿಯ ರಾಜಕಾರಣದಿಂದ ಗೌರವಯುತವಾಗಿ ನಿವೃತ್ತಿ ಪಡೆಯುವೆ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿ ಸೋಮವಾರ ಎಲ್ಲೆಡೆ ಹರಿದಾಡಿತ್ತು. ಈ ಬಗ್ಗೆ ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿತ್ತು. ಈ ಸಂಬಂಧ ಸಿಡಿಮಿಡಿಗೊಂಡ ರಮೇಶ್ ಕುಮಾರ್, ನಾನು ದೇವರಾಜ ಅರಸು ಕಾಲದಿಂದ ಸಕ್ರಿಯವಾಗಿದ್ದೇನೆ, ಆದ್ರೆ ನೀವು ನನ್ನ ಹರಿದು ತೋರಣ ಕಟ್ಟಿದ್ದೀರಾ ಎಂದು ಬೇಸರಿಸಿದರು.

'ಪ್ರಸಕ್ತ ರಾಜಕಾರಣ ಬೇಸರ ತಂದಿದೆ. ಕಳೆದ 40 ವರ್ಷದಲ್ಲಿ ಇಂತಹ ಕಲುಷಿತ ರಾಜಕಾರಣವನ್ನು ನಾನೆಂದೂ ನೋಡಿರಲಿಲ್ಲ. ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಹಣ ತೆಗೆದುಕೊಂಡು ರಾಜಕೀಯ ಮಾಡಿಲ್ಲ. ಕಾಂಗ್ರೆಸ್​ನಲ್ಲಿದ್ದ ಕೆಲವರು ಹಣಕ್ಕಾಗಿ ತಮ್ಮ ತಲೆ ಮಾರಿಕೊಂಡು ಹೋದರು. ತಾಯಿಯಂತಿರುವ ಪಕ್ಷಕ್ಕೆ ದ್ರೋಹ ಮಾಡಿದರು. ಅಧಿಕಾರದಾಸೆಗೆ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ' ಎಂದು ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದ ರಮೇಶ್​ ಕುಮಾರ್​, 'ಇದೀಗ ನಾನು ಗ್ರಾಪಂ ಚುನಾವಣೆಗೆ ಎಂಟ್ರಿ ಕೊಡಬೇಕಿದೆ,ಈ ಅವಧಿ ಮುಗಿದ ಬಲಿಕ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿ ತೋಟದ ಮನೆಯಲ್ಲಿ ಕಾಲ ಕಳೆಯುವೆ' ಎಂದಿದ್ದಾರೆ ಎಂಬ ಸುದ್ದಿ ಸೋಮವಾರ ಎಲ್ಲೆಡೆ ಹರಿದಾಡಿತ್ತು.

ಈ ಕುರಿತು ಮಂಗಳವಾರ ಸುದ್ದಿಗಾರರ ಬಳಿ ಮಾತನಾಡಿದ ರಮೇಶ್​ಕುಮಾರ್​, ನನ್ನ ರಾಜಕೀಯ ನಿವೃತ್ತಿ ಕೇವಲ ವದಂತಿ ಅಷ್ಟೆ ಎಂದು ಸ್ಪಷ್ಟಪಡಿಸದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net