ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್​ ಬೆಂಬಲ ನೀಡುತ್ತಾ?: ಈ ಬಗ್ಗೆ ಮಂಡ್ಯದಲ್ಲಿ ಎಚ್​ಡಿಕೆ ಹೇಳಿದ್ದಿಷ್ಟು...

hdk
Published on

ಮಂಡ್ಯ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೇರೊಂದು ಪಕ್ಷಕ್ಕೆ ಬೆಂಬಲ ಅಥವಾ ಸಹಕಾರ ನೀಡುವ ಬಗ್ಗೆ ನಾಳೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಮಂಡ್ಯದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದೇನೆ. ಅಲ್ಲಿ ಎಲ್ಲ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸುತ್ತೇನೆ ಎಂದರು.

ಚುನಾವಣಾ ಮೈತ್ರಿಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದಿಷ್ಟು..

ಈ ಕ್ಷಣದವರೆಗೂ ನಾನು ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಈ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಕುಮಾರಸ್ವಾಮಿ ಅವರೇ ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ. ಈವರೆಗೂ ಬಿಜೆಪಿ ಅಧಿಕೃತವಾಗಿ ನಮ್ಮ ಬೆಂಬಲ ಕೇಳಿಲ್ಲ. ಯಡಿಯೂರಪ್ಪ ಅವರು ಮಾತ್ರ ಒಂದೆರಡು ಸಲ ಈ ಬಗ್ಗೆ ಮಾತನಾಡಿದ್ದಾರೆ.

ಪ್ರತಿ ಚುನಾವಣೆ ಬಂದಾಗ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ವಿರುದ್ಧ ಹುನ್ನಾರ, ಅಪಪ್ರಚಾರ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದ್ದು ಹಾಸನದಲ್ಲಿ ಐಐಟಿ ಸ್ಥಾಪನೆಗಾಗಿ ಮಾತ್ರ ಎಂದು ಸ್ವತಃ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ಹೇಳಿದ್ದಾರೆ. ಈ ಐಐಟಿ ಹದಿನೈದು ವರ್ಷಗಳ ಬೇಡಿಕೆ. ಆದರೆ, ಕಾಂಗ್ರೆಸ್ ನಾಯಕರು ಈ ಭೇಟಿಯ ಬಗ್ಗೆ ಸಣ್ಣತನದ ಪ್ರತಿಕ್ರಿಯೆಗಳನ್ನು ನೀಡಿದರಲ್ಲದೆ, ಚುನಾವಣೆ ಮೈತ್ರಿ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದರು ಎಂದು ಅಪಪ್ರಚಾರ ನಡೆಸಿದರು. ಆದರೆ ಮೈತ್ರಿ ಬಗ್ಗೆ ನರೇಂದ್ರ ಮೋದಿ ಅವರ ಜತೆಗೂ ಚರ್ಚೆಯಾಗಿಲ್ಲ. ಬದಲಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಗೌಡರು ಚರ್ಚೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು ಕೂಡ ನಮ್ಮ ಪಕ್ಷದ ಬೆಂಬಲ ಕೇಳಿಲ್ಲ. ಹಾಗಂತ ಬಿಜೆಪಿ ಪಕ್ಷವೂ ಬೆಂಬಲ ಕೋರಿಲ್ಲ. ಯಡಿಯೂರಪ್ಪನವರು ಎರಡ್ಮೂರು ಕಡೆ ಮಾತನಾಡಿ, ಎಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಹಾಕಿಲ್ಲವೋ ಅಲ್ಲಿ ಬಿಜೆಪಿಗೆ ಬೆಂಬಲ ನೀಡಲಿ ಎಂದು ಮನವಿ ಮಾಡಿದ್ದಾರೆ. ಹಾಗೆಯೇ, ನಿನ್ನೆ ಮಂಡ್ಯದಲ್ಲೇ ಯಡಿಯೂರಪ್ಪ ಅವರು ಹೇಳಿಕೆ ನೀಡಿ; ಚುನಾವಣೆ ಮೈತ್ರಿ ಇಲ್ಲ, ಬದಲಿಗೆ ಸಹಕಾರ ಕೇಳಿದ್ದೇವೆ ಎಂದಷ್ಟೇ ಹೇಳಿದ್ದಾರೆ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಪಕ್ಷದ ನಿರ್ಧಾರವನ್ನು ತಿಳಿಸಲಾಗುವುದು.

ಜೆಡಿಎಸ್ ಆರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. ಇಷ್ಟೂ ಕಡೆ ಮೂರು ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲು ಭಾರಿ ಹಣಾಹಣಿ ನಡೆಸುತ್ತಿವೆ. ಬಿಜೆಪಿ ಕೂಡ ಸರಿಸಮನಾಗಿ ಹೋರಾಟ ನಡೆಸುತ್ತಿದೆ. ಆ ಪಕ್ಷದಿಂದ ನಮಗೇನೂ ಸಹಕಾರ ಇಲ್ಲ. ಅವರ ಮತಗಳನ್ನು ನಮ್ಮ ಅಭ್ಯರ್ಥಿಗಳಿಗೆ ಕೊಡುವಂತೆ ಅವರೇನೂ ಸೂಚನೆ ನೀಡಿಲ್ಲ. ನಾವು ಸ್ಪರ್ಧಿಸಿರುವ ಆರು ಸ್ಥಾನಗಳಲ್ಲೂ ನಮ್ಮನ್ನು ಮುಳುಗಿಸ್ತೀವಿ ಅಂತಾರೆ. ಈಗ ಮಂಡ್ಯ ಜಿಲ್ಲೆಯನ್ನೇ ಆವರಿಸಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯವರು ನಮ್ಮ ಶತ್ರು ಪಕ್ಷವೇ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ನಮಗೆ ಸರಿ ಸಮನಾದ ಶತ್ರುಗಳೇ.

ಕೇವಲ ಜೆಡಿಎಸ್‌ ಪಕ್ಷದ ಮತಗಳನ್ನು ಕಸಿಯಲು ಕಾಂಗ್ರೆಸ್‌ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದೆ. ನಮ್ಮ ಪಕ್ಷವನ್ನು ಮುಗಿಸುವುದೇ ಅವರ ಅಜೆಂಡಾ ಆಗಿದೆ. ಆದರೆ, ಜನರ ಆಶೀರ್ವಾದ ಇರುವ ಜೆಡಿಎಸ್‌ ಪಕ್ಷವನ್ನು ನಿರ್ನಾಮ ಮಾಡುವುದು ಅಸಾಧ್ಯ.

2023ಕ್ಕೆ 224 ಕ್ಷೇತ್ರಗಳಲ್ಲೂ ಕಣಕ್ಕೆ: 2023ರ ವಿಧಾನಸಭೆ ಚುನಾವಣೆಯಲ್ಲಿ ನಾವು 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಈ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳಿಲ್ಲ. ಹಾಗಂತ ಈ ಚುನಾವಣೆಯಲ್ಲೂ ನಾವು ಯಾರ ಜತೆಗೂ ಮೈತ್ರಿ ಮಾಡಿಕೊಂಡಿಲ್ಲ. ನಮ್ಮ ಹೇಳಿಕೆಗಳನ್ನು ತಮಗೆ ಬೇಕಾದ ಹಾಗೆ ಗ್ರಹಿಸಿಕೊಂಡರೆ ನಾವೇನು ಮಾಡಲು ಸಾಧ್ಯ?

ಯಡಿಯೂರಪ್ಪ ಅವರು ಬೆಂಬಲ ಕೇಳಿದ್ದಾರೆ ನಿಜ. ಅವರು ಈಗ ಮಾಜಿ ಮುಖ್ಯಮಂತ್ರಿಗಳು. ಪಕ್ಷದ ಪದಾಧಿಕಾರಿಗಳಲ್ಲ. ಅವರು ವೈಯಕ್ತಿಕವಾಗಿ ಸಹಕಾರ ಕೇಳಿದ್ದಾರೆ. ಮುಖ್ಯಮಂತ್ರಿಗಳು ಕೂಡ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ವೈಯಕ್ತಿಕ ಮಟ್ಟದಲ್ಲಿ ಚರ್ಚೆ ಆಗಿದೆ, ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಯಾವುದೇ ಊಹಾಪೋಹದಲ್ಲಿ ಸುದ್ದಿಗಳು ಬಿತ್ತರ ಆಗುವುದು ಬೇಡ. ನಾಳೆಯ ದಿನ ಎಲ್ಲ ವಿಷಯವನ್ನು ನಾನು ತಿಳಿಸುತ್ತೇನೆ. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಪರಿಷತ್‌ ಚುನಾವಣೆಯ ಮಂಡ್ಯ ಜಿಲ್ಲೆಯ ಪಕ್ಷದ ಅಭ್ಯರ್ಥಿ ಅಪ್ಪಾಜಿ ಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net