ವಾಣಿಜ್ಯ​ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ; 10ಕ್ಕೂ ಹೆಚ್ಚು ಜನರ ರಕ್ಷಣೆ

Fire Accident
Published on

ಬೆಂಗಳೂರು: ನಗರದ ಆರ್​.ಟಿ. ನಗರದಲ್ಲಿರುವ ಮಿರಾಕಲ್​ ಕೂಲ್​ಡ್ರಿಂಕ್ಸ್​ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 10ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆರ್‌.ಟಿ. ನಗರದ 80 ಅಡಿ ರಸ್ತೆಯಲ್ಲಿರುವ ಮಿರಾಕಲ್ ಡ್ರಿಂಕ್ಸ್‌ ಕಟ್ಟಡದಲ್ಲಿ ಹಲವು ಕಚೇರಿಗಳಿವೆ. ಇಲ್ಲಿ 30ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಟ್ಟಡದಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನೋಡುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ಕೂಡಲೇ ಪೊಲೀಸರು ಹಾಗೂ ಆಗ್ನಿಶಾಮಕ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಕಟ್ಟಡದಲ್ಲಿನ ಡಿಜಿ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದ್ದು, ಕ್ಷಣಾರ್ಧದಲ್ಲೇ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಹಾಗೂ ಪೊಲೀಸ್​ ಅಧಿಕಾರಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಟ್ಟಡದಲ್ಲಿ ಸಿಲುಕಿದ್ದ 10 ಮಂದಿಯನ್ನು ರಕ್ಷಿಸಲಾಗಿದ್ದು, ಯಾರಿಗೂ ಪ್ರಾಣಾಪಾಯವಾಗಿಲ್ಲ. ಕೆಲವರಿಗೆ ಬೆಂಕಿಯ ಹೊಗೆಯಿಂದ ಉಸಿರಾಟದ ಸಮಸ್ಯೆಯಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net