

ಕಣ್ಣೂರು: ಬಾಂಬ್ ತಯಾರಿಸುವ ವೇಳೆ ಅದು ಸ್ಫೋಟಗೊಂಡ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಪಾನೂರು ಬಳಿ ನಡೆದಿದೆ.
ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಓರ್ವ ಮೃತಪಟ್ಟಿದ್ದಾನೆ. ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಣ್ಣೂರು ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮೃತನನ್ನು ಶೆರಿನ್ (26) ಎಂದು ಗುರುತಿಸಲಾಗಿದ್ದು, ಈತ ಸ್ಥಳೀಯ ಸಿಪಿಎಂ ಕಾರ್ಯಕರ್ತ ಎಂದು ತಿಳಿದು ಬಂದಿದ್ದು, ವಿನೀಶ್ (24) ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ. ಮನೆ ಒಂದರ ಟೆರೇಸ್ ಮೇಲೆ ಬಾಂಬ್ ತಯಾರಿಸುವ ವೇಳೆ ದುರ್ಘಟನೆ ಸಂಭವಿಸಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಣ್ಣೂರು ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ಬಾಂಬ್ ಬ್ಲಾಸ್ಟ್ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಲೋಕಸಭೆ ಚುನಾವಣೆಯನ್ನು ಹಾಳು ಮಾಡಲು ಸಿಪಿಎಂ ಮುಂದಾಗಿದ್ದು, ಇದಕ್ಕೆ ಸ್ಪಷ್ಟವಾದ ನಿದರ್ಶನ ದೊರೆತಿದೆ. ಪೊಲೀಸರಿಗೆ ಈ ಬಗ್ಗೆ ಮೊದಲೇ ಮಾಹಿತಿ ತಿಳಿದಿದ್ದರೂ ಸಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹಿರಿಯ ಸಿಪಿಎಂ ನಾಯಕರ ಮಾರ್ಗದರ್ಶನದಲ್ಲಿ ಬಾಂಬ್ಗಳನ್ನು ತಯಾರಿಸಲಾಗಿದ್ದು, ಈ ಬಗ್ಗೆ ವಿಸ್ತೃತ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.