

ಹೈದರಾಬಾದ್: ಜನರ ಸುರಕ್ಷೆತೆಗಾಗಿ ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ಜಾರಿಗೆ ತಂದಿದ್ದು, ವಾಹನ ಚಾಲನೆ ಮಾಡುವಾಗ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾರು ಚಲಾಯಿಸುವವರು ಸೀಟ್ ಬೆಲ್ಟ್ ಧರಿಸಬೇಕು ಎಂಬುದರ ಜೊತೆಗೆ ಅನೇಕ ನಿಯಮಗಳನ್ನು ಜಾರಿಗೆ ತರಲಾಗಿದೆ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ದಂಡವನ್ನು ಕಟ್ಟಬೇಕಾಗುತ್ತದೆ. ಇದೀಗ ಅದಕ್ಕೆ ಪೂರಕವೆಂಬಂತೆ ಸ್ವಾರಸ್ಯಕರ ಘಟನೆಯೊಂದು ನಡೆದಿದ್ದು, ಈ ವಿಚಿತ್ರ ಪ್ರಕರಣ ಎಲ್ಲರ ಹುಬ್ಬೇರುವಂತೆ ಮಾಡಿದೆ.
ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಚಾಲಕನೋರ್ವ ಸೀಟ್ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಆತನಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಈ ವಿಚಿತ್ರ ಘಟನೆ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಈ ಹಿಂದೆ ಮಹಬೂಬಾಬಾದ್ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು.
ಭದ್ರಾದ್ರಿ ಕೊತಗುಡೆಂ ಜಿಲ್ಲೆ ಪಲ್ವಂಚದಲ್ಲಿ ನಾಗಿರೆಡ್ಡಿ ಎಂಬಾತ ಎಂದಿನಂತೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದಿದ್ದಾನೆ. ಈತನನ್ನು ತಡೆದ ಪೊಲೀಸರು 100 ರೂ. ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಯಾವ ಕಾರಣಕ್ಕೆ ಎಂದು ರೈತ ಕೇಳಿದಾಗ ಸೀಟ್ ಬೆಲ್ಟ್ ಧರಿಸದೆ ಟ್ರ್ಯಾಕ್ಟರ್ ಚಲಾಯಿಸಿದ ಕಾರಣ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾತನ್ನು ಕೇಳಿ ಗಾಬರಿಗೊಂಡ ರೈತ ಕೂಡಲೇ ಟ್ರ್ಯಾಕ್ಟರ್ ಶೋರೂಮ್ಗೆ ಕರೆ ಮಾಡಿದ್ದು, ಟ್ರ್ಯಾಕ್ಟರ್ ಗೆ ಸೀಟ್ ಬೆಲ್ಟ್ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾನೆ. ಈ ವಿಚಿತ್ರ ಘಟನೆ ಎಲ್ಲರ ಗಮನ ಸೆಳೆದಿದ್ದು, ಪೊಲೀಸರ ನಡೆಗೆ ಕಿಡಿಕಾರಿದ್ದಾರೆ. ಈ ಹಿಂದೆ ಮಹಬೂಬಾಬಾದ್ ಜಿಲ್ಲೆಯ ಸೀತಾನಗರಂ ಗ್ರಾಮದ ಟ್ರ್ಯಾಕ್ಟರ್ ಚಾಲಕನಿಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ದಂಡ ಹಾಕಲಾಗಿತ್ತು.