ಸಾಸ್ತಾನ ಪರಿಸರ ಧೂಳುಮಯ: ರಾಷ್ಟ್ರೀಯ ಹೆದ್ದಾರಿ ಮರು ಡಾಂಬರೀಕರಣ ತಂದ ಸಂಕಷ್ಟ

heddari 1
ಗಾಳಿ ರಭಸವನ್ನು ಬಳಸಿ ರಸ್ತೆಯ ಧೂಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದಾಗಿ ಪರಿಸರವಿಡೀ ಧೂಳುಮಯವಾಗಿದೆ.
Published on

ರವೀಂದ್ರ ಕೋಟ
ಕೋಟ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಸ್ತಾನ ಪರಿಸರದಲ್ಲಿ ಮರು ಡಾಮರೀಕರಣ ಕಾಮಗಾರಿಯು ವೇಗ ಪಡೆದಿದ್ದು, ಅಸಮರ್ಪಕ ರೀತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಯಿಂದಾಗಿ ಸ್ಥಳೀಯ ನಿವಾಸಿಗಳು, ಅಂಗಡಿ ವ್ಯಾಪಾರಸ್ಥರು ಮಾತ್ರವಲ್ಲದೆ ನಿತ್ಯ ಪ್ರಯಾಣಿಕರು ಅಸಹನೀಯ ಸಂಕಷ್ಟ ಅನುಭವಿಸುವಂತಾಗಿದೆ.

ಪ್ರಸ್ತುತ ಸುಮಾರು ಒಂದು ಕಿ.ಮೀ. ದೂರದವರೆಗೆ ರಸ್ತೆಯ ಹಳೇ ಡಾಂಬರನ್ನು ಕಿತ್ತು ಮರು ಡಾಂಬರೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಭಾರಿ ಗಾತ್ರದ ಯಂತ್ರಗಳನ್ನು ಬಳಸಲಾಗುತ್ತಿದೆ. ಪರಿಣಾಮವಾಗಿ ಪರಿಸರದ ಮನೆಗಳು, ಅಂಗಡಿಗಳು, ಆಟೋ, ಹೊಟೇಲ್‌ಗಳು ಧೂಳುಮಯವಾಗಿವೆ. ವಿಪರೀತವಾದ ಧೂಳಿನಿಂದಾಗಿ ಶಾಲಾ ಮಕ್ಕಳು, ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರು ಯಾತನೆ ಪಡುವಂತಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಸಂಚಾರ ವ್ಯವಸ್ಥೆಯೂ ಅಯೋಮಯ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವರೆಗೆ ರಸ್ತೆ ನಿರ್ವಹಣೆ ಮಾಡುತ್ತಿದ್ದ ಕಂಪನಿಯನ್ನು ಬದಲಾಯಿಸಿದ್ದು, ಇದೀಗ ಹೊಸ ಕಂಪನಿಯೊಂದು ರಸ್ತೆ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಿದೆ. ಈ ಹಿಂದೆ ಹೆದ್ದಾರಿ ನಿರ್ವಹಣೆಗೈದ ಕಂಪನಿ ರಸ್ತೆ ನಿರ್ವಹಣಾ ಕಾಮಗಾರಿ ವೇಳೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ನೀಡುವ ನಿಟ್ಟಿನಲ್ಲಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಸಮರ್ಪಕ ವ್ಯವಸ್ಥೆ ಕಲ್ಪಿಸುತ್ತಿತ್ತು. ಆದರೆ ಈಗ ಕಾಮಗಾರಿ ಕೈಗೆತ್ತಿಗೊಂಡಿರುವ ಕಂಪನಿ ಸಂಚಾರ ಮಾರ್ಗ ಬದಲಾವಣೆಯ ವೇಳೆ ಆಯಕಟ್ಟಿನ ಜಾಗಗಳಲ್ಲಿ ಸೂಚನಾಲಕ ಅಳವಡಿಸದಿರುವುದರಿಂದ ವಾಹನ ಚಾಲಕರು ಗೊಂದಲಕ್ಕೀಡಾಗುವಂತಾಗಿದೆ.

ಅಪಘಾತ, ಪ್ರಾಣ ಹಾನಿ ಸಾಧ್ಯತೆ

ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿ ಬ್ಯಾರಿಕೇಡ್‌ಗಳನ್ನು ಅಳವಡಿಸುವುದರಿಂದ ವಾಹನ ಚಾಲಕರಿಗೆ ಯಾವ ಭಾಗದಲ್ಲಿ ಸಂಚರಿಸಬೇಕು ಎಂಬುವುದೇ ತಿಳಿಯದಂತಾಗಿದೆ. ಇದರಿಂದಾಗಿ ವಾಹನಗಳು ಅಪಘಾತಕ್ಕೀಡಾಗುವ ಹಾಗೂ ಪ್ರಾಣ ಹಾನಿ ಉಂಟಾಗುವ ಸಾಧ್ಯತೆ ದಟ್ಟವಾಗಿದೆ ಎಂಬ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಅಸಮರ್ಪಕ ಅಭಿವೃದ್ಧಿ ಕಾಮಗಾರಿಯಿಂದಾಗಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಗಾಳಿ ರಭಸವನ್ನು ಬಳಸಿ ರಸ್ತೆಯ ಧೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದ್ದು, ಸುತ್ತಮುತ್ತಲಿನ ಮನೆಗಳು, ಅಂಗಡಿಗಳ ವ್ಯಾಪಾರಸ್ಥರು ಧೂಳಿನ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ.

ಸಮರ್ಪಕ ವ್ಯವಸ್ಥೆ ಕಲ್ಪಿಸಲು ಆಗ್ರಹ

ರಸ್ತೆ ಕಾಮಗಾರಿ ಸಂದರ್ಭದಲ್ಲಿ ಜನಸಾಮಾನ್ಯರಿಗೆ, ವಾಹನ ಸವಾರರಿಗೆ ತೊಂದರೆಯಾಗದಂತೆ ರಸ್ತೆ ಅಭಿವೃದ್ಧಿಗೊಳಿಸಬೇಕಿದೆ. ಅದನ್ನು ಬಿಟ್ಟು ಮನಸೋಇಚ್ಛೆ ಕಾಮಗಾರಿ ನಡೆಸುವುದು ಸಲ್ಲದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಯನ್ನು ನಡೆಸುವಂತೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಾರಾಯಣ ಐರೋಡಿ ಅವರು ಟೋಲ್ ನಿರ್ವಹಿಸುವ ಕಂಪನಿಗೆ ಎಚ್ಚರಿಸಿದ್ದಾರೆ. ಆಯಕಟ್ಟಿನ ಜಾಗಗಳಲ್ಲಿ ಸೂಚನಾ ಲಕ ಅಳವಡಿಕೆ, ಧೂಳಿನಿಂದ ಶಾಲಾ ಮಕ್ಕಳಿಗೆ, ಸಾವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net