More

    ಹವಾಮಾನ ವೈಪರೀತ್ಯದಿಂದ ಕರಟಿದ ಹೂವುಗಳು: ಗೇರು ಇಳುವರಿ ಕುಂಠಿತ

    ಅನಂತ್ ನಾಯಕ್ ಮುದ್ದೂರು ಕೊಕ್ಕರ್ಣೆ
    ಹವಾಮಾನ ವೈಪರೀತ್ಯದ ಪರಿಣಾಮ, ಚಳಿ ಮುಂತಾದ ಕಾರಣಗಳಿಂದ ಗೇರು ಬೆಳೆಗಾರರಲ್ಲಿ ಆತಂಕ ಎದುರಾಗಿದೆ. ಏಪ್ರಿಲ್ ತಿಂಗಳು ಪ್ರಾರಂಭವಾಗಿದ್ದರೂ ಕೂಡ ಕೆಲವು ಮರಗಳಲ್ಲಿ ಹೂವು ಬಿಟ್ಟಿದ್ದು, ಇನ್ನೂ ಕೆಲವು ಮರಗಳಲ್ಲಿ ವಿರಳವಾಗಿ ಫಸಲು ಪ್ರಾರಂಭವಾಗಿದೆ.

    ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಹೂವು ಬಿಡುವ ಕಾಲವಾಗಿದ್ದು, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕಾಯಿ ಬಿಡುವ ಹಂತವಾಗಿದೆ. ಕೆಲವೊಂದು ಕಡೆಗಳಲ್ಲಿ ಹೂವು ಬಿಡುವ ಪ್ರಕ್ರಿಯೆ ಪ್ರಾರಂಭವಾಗಿದೆ.

    ಕಳೆದ ವರ್ಷ ಇದೇ ಅವಧಿಗೆ ಕೆ.ಜಿ.ಗೆ 105-110 ರೂ. ಧಾರಣೆ ಇತ್ತು. ಆದರೆ ಪ್ರಸಕ್ತ ಅವಧಿಯಲ್ಲಿ ಕೆ.ಜಿ.ಗೆ 90-92 ರೂ. ಆಸುಪಾಸು ಇದೆ. ಬೆಲೆ ಕುಸಿತ ತಾತ್ಕಾಲಿಕ ಎನ್ನಲಾಗುತ್ತಿದ್ದು, ಏಪ್ರಿಲ್ 15ರ ನಂತರ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

    ಜನವರಿಯಲ್ಲಿ ಮಾರುಕಟ್ಟೆಗೆ ಬರಬೇಕಿದ್ದ ಪ್ರಥಮ ಹಂತದ ಬೆಳೆ ಬಂದಿಲ್ಲ. ಊರ ಮರಗಳು ಹೂವು ಬಿಟ್ಟಿಲ್ಲ. ಹೈಬ್ರಿಡ್ ಮರಗಳಲ್ಲಿ ಸ್ವಲ್ಪ ಕಾಯಿ ಕಟ್ಟಿದ್ದು, ಹವಾಮಾನ ವೈಪರೀತ್ಯದಿಂದ ಹೂವು ಕರಟಿದೆ. ಇದು ಬೆಳೆಗಾರರಿಗೂ ಗೋಡಂಬಿ ಕಂಪೆನಿಗಳಿಗೂ ಭಾರಿ ಹೊಡೆತ ನೀಡಿದೆ.

    ಸಾಮಾನ್ಯವಾಗಿ ಗೇರುಬೀಜ ಬೆಳೆ ಮೂರು ಹಂತದಲ್ಲಿರುತ್ತದೆ. ಜನವರಿಯಲ್ಲಿ ಪ್ರಥಮ, ಮಾರ್ಚ್ – ಏಪ್ರಿಲ್‌ನಲ್ಲಿ ದ್ವಿತೀಯ, ಮೇ ಅಥವಾ ಮಳೆಗಾಲಕ್ಕೂ ಮುನ್ನ ಮೂರನೇ ಹಂತದ ಬೆಳೆ ಕೃಷಿಕರ ಕೈಗೆ ಸಿಗುತ್ತದೆ. ಪ್ರಸ್ತುತ ವ್ಯತಿರಿಕ್ತ ವಾತಾವರಣ ಗೇರು ಬೆಳೆಗಾರರನ್ನು ಅಲ್ಲೋಲ ಕಲ್ಲೋಲಗೊಳಿಸಿದೆ.
    ಅಡಕೆ ಬೆಳೆಯ ಬೆಲೆ ಏರುತ್ತಿರುವುದರಿಂದ, ಕೆ.ಜಿ.ಗೆ ಉತ್ತಮ ಧಾರಣೆ ದೊರಕುತ್ತಿರುವುದರಿಂದ ಕೇವಲ ಕೆ.ಜಿ.ಗೆ 100 ರೂ. ಸಿಗುವ ಗೇರು ಬೀಜ ಮೂಲೆಪಾಲಾಗುತ್ತಿದೆ. ಬೆಳೆಗಾರರು ಗೇರು ಮರವನ್ನು ಕಡಿದು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ. ವೈಜ್ಞಾನಿಕವಾಗಿ ಗೇರು ಬೆಳೆ ಬೆಳೆಯಬೇಕಾದ ಅನಿವಾರ್ಯತೆ ಇದೆ.

    ಕರೋನಾ ನಂತರ ದಿನಗಳಲ್ಲಿ ಗೇರುಬೀಜದ ಮಾರುಕಟ್ಟೆ ಅಸ್ತವ್ಯಸ್ತಗೊಂಡಿದೆ. ಗೇರುಬೀಜ ಕರ್ನಲ್‌ಗಳಿಗೆ ಬೇಡಿಕೆ ಇಲ್ಲ. ಏಪ್ರಿಲ್ ಮೇ ತಿಂಗಳಲ್ಲಿ ಸೆಖೆ ಅಧಿಕವಾಗಿರುವುದರಿಂದ ಶುಭಕಾರ್ಯಕ್ರಮಗಳಿಗೆ ಗೇರುಬೀಜದ ಬೇಡಿಕೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಬೆಲೆಯ ಏರಿಕೆ ಕಾಣಬಹುದು.
    -ಕಾಶೀನಾಥ ಶೆಣೈ, ಕಜ್ಕೆ ಸುಪ್ರಿತಾ ಕ್ಯಾಶ್ಯೂಸ್ ಮಾಲೀಕ

    ಕರೋನಾ ನಂತರದ ದಿನಗಳಲ್ಲಿ ಮಾರುಕಟ್ಟೆಯ ವೈಪರೀತ್ಯದಿಂದಾಗಿ ಕೆಲವೊಂದು ಗೇರುಬೀಜ ಕಾರ್ಖಾನೆಗಳು ಮುಚ್ಚಿವೆ. ಇನ್ನೂ ಕೆಲವು ಮುಚ್ಚುವ ಹಂತದಲ್ಲಿದೆ. ಸ್ಥಳೀಯ ಗೇರುಬೀಜಗಳಿಗೆ ಕೆ.ಜಿ.ಗೆ 88-90ರೂ ಇದೆ. ರಫ್ತು ಕಡಿಮೆಯಾಗಿದೆ. ಉತ್ಪಾದನೆ ಮಾಡಿದರೆ ಬೇಡಿಕೆ ಇಲ್ಲ. -ಗೋಪಿನಾಥ್ ಕಾಮತ್, ವಂಡಾರು ಚಿತಾರ ಕ್ಯಾಶ್ಯೂಸ್ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts