More

    ಭಾರತದಲ್ಲೇ ಅತೀ ದೊಡ್ಡ ಕಾಳಿಂಗ ಹೆಬ್ರಿ ಸೀತಾನದಿ ಬಳಿ ಪತ್ತೆ

    ನರೇಂದ್ರ ಎಸ್.ಮರಸಣಿಗೆ ಹೆಬ್ರಿ
    ಪಶ್ಚಿಮ ಘಟ್ಟದ ಆಗುಂಬೆಯ ಸಮೀಪದ ಹೆಬ್ರಿ ತಾಲೂಕಿನ ನಾಡಪಾಲ್ ಗ್ರಾಮದ ಸೀತಾನದಿ ಬಳಿ ಅಪರೂಪದ ಕಾಳಿಂಗ ಸರ್ಪ ಒಂದು ಪತ್ತೆಯಾಗಿದೆ. ಬೃಹತ್ ಗಾತ್ರದ 15 ಅಡಿ ಉದ್ದ 12.5 ಕೆ.ಜಿ. ತೂಕದ ಅಪರೂಪದ ಕಾಳಿಂಗ ಸರ್ಪವೊಂದನ್ನು ಉರಗ ತಜ್ಞ ಡಾ. ಪಿ. ಗೌರಿಶಂಕರ್ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    15 ಅಡಿ ಉದ್ದದ ಕಾಳಿಂಗ ಹಾವು ಕಾಣಿಸಿದ್ದು, ಭಾರತದಲ್ಲಿ ಇದೇ ಮೊದಲು ಎಂದು ಹರ್ಪಿಟಾಲಜಿಸ್ಟ್ ಡಾ.ಪಿ.ಗೌರಿಶಂಕರ್ ಅಭಿಪ್ರಾಯ ಪಟ್ಟಿದ್ದಾರೆ. ಕಾಳಿಂಗ ಸರ್ಪ ವಿಶ್ವದ ಅತಿ ಉದ್ದದ ವಿಷಪೂರಿತ ಹಾವುಗಳಾಗಿದ್ದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಈ ಹಾವುಗಳು ಹೆಚ್ಚಾಗಿ ಕಂಡು ಬರುತ್ತವೆ. ಥೈಲ್ಯಾಂಡ್‌ನಲ್ಲಿ 18 ಅಡಿಗಳಷ್ಟು ಉದ್ದದ ಹಾವುಗಳಿವೆ. ಆದರೆ ಪ್ರಸ್ತುತ ಆಗುಂಬೆ ಬಳಿ ಪತ್ತೆಯಾಗಿರುವುದು ಭಾರತದಲ್ಲಿ ಅಪರೂಪದ ಹಾವುಗಳಲ್ಲಿ ಇದು ಒಂದಾಗಿದೆ.

    ಭಾರತದಲ್ಲೇ ಅತೀ ದೊಡ್ಡ ಕಾಳಿಂಗ ಹೆಬ್ರಿ ಸೀತಾನದಿ ಬಳಿ ಪತ್ತೆ

    ಸಂಗಾತಿಯನ್ನು ಅರಸಿ ಬರುವ ಕಾಳಿಂಗ ಸರ್ಪ

    ಫೆಬ್ರವರಿಯಿಂದ ಮೇ ತಿಂಗಳು ಸಂತಾನೋತ್ಪತ್ತಿ ಅವಧಿಯಾಗಿದ್ದು, ಈ ಹಾವುಗಳು ತನ್ನ ಸಂಗಾತಿಯನ್ನು ಅರಸಿ ಹೊರಬರುತ್ತವೆ. ಇದರಿಂದಾಗಿ ಈ ಸಂದರ್ಭದಲ್ಲಿ ಮಾನವ-ಹಾವುಗಳ ಸಂಘರ್ಷ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಕಾಳಿಂಗ ಫೌಂಡೇಶನ್‌ಗೆ ಹೆಚ್ಚಿನ ಕರೆಗಳು ಬರುತ್ತವೆ ಎಂದು ಡಾ. ಶಂಕರ್ ಹೇಳಿದ್ದಾರೆ.

    ಕಾಳಿಂಗ ಸರ್ಪದ ಸರಾಸರಿ ತೂಕ

    ಈ ಹಾವುಗಳ ಸರಾಸರಿ ತೂಕವು ಸಾಮಾನ್ಯವಾಗಿ 3.5 ಕಿ.ಗ್ರಾಂನಿಂದ 7 ಕಿಲೋ ಗ್ರಾಂ.ಗಳ ವರೆಗೆ ಇರುತ್ತದೆ. ಹೆಣ್ಣು 2ರಿಂದ 3.5 ಕಿಲೋ ಗ್ರಾಂಗಳಷ್ಟು ಮತ್ತು ಗಂಡು 3.5ರಿಂದ 6 ಕಿಲೋ ಗ್ರಾಂಗಳಷ್ಟು ತೂಕವಿರುತ್ತದೆ. ಆದರೆ, ಪ್ರಸ್ತುತ ರಕ್ಷಣೆ ಮಾಡಿದ ಹಾವು 12.5 ಕಿಲೋ ಗ್ರಾಂಗಳಷ್ಟು ತೂಕವನ್ನು ಹೊಂದಿದ್ದು, ಸುಮಾರು 15 ಅಡಿ ಉದ್ದವಿದೆ. ಇಷ್ಟು ದೊಡ್ಡ ಗಾತ್ರದ ಕಾಳಿಂಗ ಸರ್ಪ ಇಡೀ ಭಾರತದಲ್ಲೇ ಸಿಗುವುದು ಅಪರೂಪ. ಈ ಹಾವುಗಳ ಪತ್ತೆ ಮಲೆನಾಡು ಪ್ರದೇಶದಲ್ಲಿ ಬೆಳೆಯುತ್ತಿರುವ ಆರೋಗ್ಯಕರ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಶಂಕರ್ ತಿಳಿಸಿದ್ದಾರೆ.

    ಭಾರತದಲ್ಲೇ ಅತೀ ದೊಡ್ಡ ಕಾಳಿಂಗ ಹೆಬ್ರಿ ಸೀತಾನದಿ ಬಳಿ ಪತ್ತೆ

    ಸಂತಾನೋತ್ಪತ್ತಿ ಸಮಯದಲ್ಲಿ ಕಾಳಿಂಗ ಸಂಚಾರ

    ಸಾಮಾನ್ಯವಾಗಿ ಮಾರ್ಚ್ ಮೊದಲವಾರದಿಂದ ಜೂನ್ ಮೊದಲ ವಾರದ ವರೆಗೂ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಮಯವಾಗಿದ್ದು, ಇದಕ್ಕೂ ಮುಂಚೆ ತನ್ನ ಆಹಾರವನ್ನು ಹುಡುಕಿ ದೇಹವನ್ನು ಮಿಲನಕ್ಕೆ ಅಣಿಗೊಳಿಸುವ ಪ್ರಕ್ರಿಯೆ ಮುಗಿಸಿರುತ್ತವೆ. ವಯಸ್ಸಿಗೆ ಬಂದ ಹೆಣ್ಣು ಹಾವು ತಾನು ಸಂತಾನೋತ್ಪತ್ತಿಗೆ ಸಿದ್ಧ ಎಂದು ತನ್ನ ಜನನಾಂಗದಿಂದ ಲೈಂಗಿಕ ಸಂಕೇತ ವನ್ನು ಹೊರಸೂಸುವ ರಾಸಾಯನಿಕ (ಸೆಕ್ಸ್ ಫೆರಮೋನ್) ಅಂಶವನ್ನು ಹೊರಹಾಕುವುದರ ಮೂಲಕ ವ್ಯಕ್ತ ಪಡಿಸುತ್ತದೆ. ಈ ರಸಾಯನಿಕಕ್ಕೆ ಆಕರ್ಷಿತವಾದ ಗಂಡುಗಳು ಮಿಲನಕ್ಕಾಗಿ ಹೆಣ್ಣಿನ ಹುಡುಕಾಟದಲ್ಲಿ ತೊಡಗುತ್ತವೆ. ಅದ್ದರಿಂದ ಎಲ್ಲಾ ಕಡೆಗಳಲ್ಲಿ ಕಾಳಿಂಗ ಸರ್ಪಗಳ ಸಂಚಾರ ಸಾಮಾನ್ಯ.

    ನಾನು ಸುಮಾರು 23 ವರ್ಷದಲ್ಲಿ 500ಕ್ಕೂ ಹೆಚ್ಚು ಕಾಳಿಂಗ ಸರ್ಪವನ್ನು ಸಂರಕ್ಷಣೆ ಮಾಡಿದ್ದೇನೆ. ಎಂದಿಗೂ 15 ಅಡಿ ಉದ್ದ ಹಾಗೂ 12.5 ಕೆ.ಜಿ. ತೂಕದ ಕಾಳಿಂಗವನ್ನು ನೋಡಿಲ್ಲ. ಮೂರು ಬಾರಿ 10 ಕೆ.ಜಿ. ತೂಗುವ ಕಾಳಿಂಗವನ್ನು ಸಂರಕ್ಷಣೆ ಮಾಡಿದ್ದೇನೆ. ಕಾಳಿಂಗ ಫೌಂಡೇಶನ್ ಮೂಲಕ ಸಂರಕ್ಷಣೆ, ಸಂಶೋಧನೆ ನಡೆಸುತ್ತಿದ್ದೇವೆ. ಈಗಾಗಲೇ ನಾನು ನಾಲ್ಕು ವಿಧದ ಪ್ರಭೇದಗಳನ್ನು ಗುರುತಿಸಿ ಅಧ್ಯಯನ ಮಾಡುತ್ತಿದ್ದೇನೆ.
    -ಡಾ.ಪಿ.ಗೌರಿ ಶಂಕರ್, ಉರಗತಜ್ಞ ಹಾಗೂ ಕಾಳಿಂಗದ ಬಗ್ಗೆ ಸಂಶೋಧನೆ ಮಾಡಿರುವವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts