More

    ಸಮಯ ಮೀರಿದ ನಂತರವೂ ಮತದಾನ

    ಆಲೂರು: ತಾಲೂಕಿನಾದ್ಯಂತ ಶುಕ್ರವಾರ ಲೋಕಸಭೆ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದು, ಶೇ.78ರಷ್ಟು ಮತದಾನ ದಾಖಲಾಗಿದೆ.
    ಚಿಗಳೂರು ಮತಗಟ್ಟೆ ಸಂಖ್ಯೆ 141 ಮತ್ತು ಆಲೂರು ಪೂರ್ವಭಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 59 ರಲ್ಲಿ ಇವಿಎಂ ಮತ ಯಂತ್ರಗಳಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ, ತಕ್ಷಣ ಬದಲಾಯಿಸಿ ಮತದಾನಕ್ಕೆ ಅನುಕೂಲ ಕಲ್ಪಿಸಲಾಯಿತು. ಉಳಿದಂತೆ ತಾಲೂಕಿನ ಎಲ್ಲ 95 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.
    ಕಣತೂರು ಮತಗಟ್ಟೆಯಲ್ಲಿ 1300 ಕ್ಕೂ ಹೆಚ್ಚು ಮತದಾರರಿರುವುದರಿಂದ ಮತಗಟ್ಟೆ ವ್ಯಾಪ್ತಿಯೊಳಗಿರುವ ಮತದಾರರಿಗೆ ಟೋಕನ್ ನೀಡಿ, ಸಮಯ ಮೀರಿದ ನಂತರವೂ ಮತದಾನಕ್ಕೆ ಅನುಕೂಲ ಕಲ್ಪಿಸಲಾಯಿತು ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ನಂದಕುಮಾರ್ ತಿಳಿಸಿದರು. ಆನೆ ಭೀತಿ: ಸುಬ್ರಹ್ಮಣ್ಯಮಠ ಹಾಗೂ ಹ್ಯಾರಗಳಲೆ ಗ್ರಾಮದ ಆಸುಪಾಸಿನಲ್ಲಿ ಒಂಟಿ ಕಾಡಾನೆ ಓಡಾಡುತ್ತಿತ್ತು. ಈ ಪ್ರದೇಶಗಳಲ್ಲಿ ವಲಯ ಅರಣ್ಯಾಧಿಕಾರಿ ಯತೀಶ್ ಮತ್ತು ತಂಡದವರು ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿ ಹೋಗಲು ಸುರಕ್ಷತೆ ಕಾಪಾಡಿದರು.
    ಬೆಳಗ್ಗೆ 7 ರಿಂದ 11 ಗಂಟೆವರೆಗೆ ಮತದಾರರು ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಧ್ಯಾಹ್ನ ಒಂದು ಗಂಟೆಯಿಂದ ನಾಲ್ಕು ಗಂಟೆವರೆಗೆ ಬಿಸಿಲಿನ ತಾಪದಿಂದ ಮತದಾನ ಮಂದಗತಿಯಲ್ಲಿ ಸಾಗಿತು. ಆದರೂ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.50ರಷ್ಟು ಮತದಾನವಾಗಿತ್ತು.
    ಮತಗಟ್ಟೆಗಳಲ್ಲಿ ಬಿಸಿಲಿನ ತಾಪದಲ್ಲಿ ಮತದಾರರು ಬಳಲದಂತೆ ಎಲ್ಲ ಮತಗಟ್ಟೆಗಳ ಸಮೀಪ ಶಾಮಿಯಾನ ಹಾಕಿ ನೆರಳು ಮಾಡಲಾಗಿತ್ತು. ಅಂಗವಿಕಲರಿಗೆ ವಿಶೇಷವಾಗಿ ತ್ರಿಚಕ್ರ ಸೈಕಲ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಕೇಂದ್ರದೊಳಗೆ ಪ್ರವೇಶ ಮಾಡಿದ ಮತದಾರರ ಬಳಿ ಇದ್ದ ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡು ನಂತರ ಹಿಂದಿರುಗಿಸಿದರು.
    ಚುನಾವಣೆಗೆ ಸ್ಪರ್ಧಿಸಿರುವ ಆಲೂರು ತಾಲೂಕು ನಿವಾಸಿ ಹೇಮಂತ ಗವೀಶ್ ಅವರು ಭರತೂರು ಮತಗಟ್ಟೆ ಸಂಖ್ಯೆ 230ರಲ್ಲಿ, ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಚ್.ಕೆ.ಕುಮಾರಸ್ವಾಮಿ ಅವರ ಪತ್ನಿ ಚಂಚಲಾ ಕುಮಾರಸ್ವಾಮಿ ಅವರೊಂದಿಗೆ ಬೋಸ್ಮಾನಹಳ್ಳಿ ಮತಗಟ್ಟೆ ಸಂಖ್ಯೆ 199ರಲ್ಲಿ ಮತದಾನ ಮಾಡಿದರು. ಬಸವೇಶಪುರದ ವಿಕಲಚೇತನ ಸತೀಶ್ ಅವರು ಬ್ಯಾಬಕಾಲನಿ ಮತಗಟ್ಟೆಯಲ್ಲಿ ವ್ಹೀಲ್ ಚೇರ್‌ನಲ್ಲಿ ಮತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts