More

  ರಾಜ್ಯದ 25 ಸ್ಥಾನಗಳಲ್ಲಿ ಗೆಲುವು ನಿಶ್ಚಿತ

  ಶಿಕಾರಿಪುರ: ಮಾಜಿಮುಖ್ಯ ಬಿ.ಎಸ್.ಯಡಿಯೂರಪ್ಪ ಮುಂಜಾನೆ ಕುಟುಂಬದ ಸದಸ್ಯರ ಜತೆಗೆ ಆಡಳಿತ ಸೌಧದ 137ನೇ ಮತಗಟ್ಟೆಯಲ್ಲಿ ಮಂಗಳವಾರ ಮತದಾನ ಮಾಡಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಕುಟುಂಬದ ಸದಸ್ಯರು ಹಕ್ಕು ಚಲಾಯಿಸಿದರು.

  ಮತದಾನಕ್ಕೂ ಮುನ್ನ ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿ ದರ್ಶನಾಶೀರ್ವಾದ ಪಡೆದ ಯಡಿಯೂರಪ್ಪ, ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ರಾಯರ ವೃಂದಾವನ ದರ್ಶನ ಮಾಡಿ ಮಂತ್ರಾಕ್ಷತೆ ಪಡೆದರು.
  ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಲಿದ್ದಾರೆ. ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ 14 ಸ್ಥಾನಗಳನ್ನೂ ಗೆಲ್ಲಲಿದ್ದೇವೆ. ಎರಡನೇ ಹಂತದ ಚುನಾವಣೆಯಲ್ಲಿ ಒಂದೆರಡು ವ್ಯತ್ಯಾಸವಾಗಬಹುದು. ರಾಜ್ಯದಲ್ಲಿ 25 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
  ರಾಘವೇಂದ್ರ ಅವರು ಮಾಡಿದಂತಹ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ನೆರವಾಗಲಿವೆ. ದೇಶದಲ್ಲಿಯೇ ಅತಿ ಹೆಚ್ಚು ಅನುದಾನ ತಂದ ಸಂಸದರ ಸಾಲಿನಲ್ಲಿ ರಾಘವೇಂದ್ರ ಕೂಡ ಒಬ್ಬರು. ಅವರೊಬ್ಬ ಅಭಿವೃದ್ಧಿಯ ಕನಸುಗಾರ. ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಜನರ ನಿರೀಕ್ಷೆ ಮೀರಿ ಅಭಿವೃದ್ಧಿ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳಿ ಅವರಿಗೆ ಈ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ತಂದುಕೊಡಲಿದೆ ಎಂದರು.
  ಬಿ.ವೈ.ರಾಘವೇಂದ್ರ ಮಾತನಾಡಿ, ಇಡೀ ಕ್ಷೇತ್ರದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಜನತೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂದು ಸಂಕಲ್ಪ ಮಾಡಿದ್ದಾರೆ. ಮೋದಿ ಅವರ ಸಮರ್ಥ ಆಡಳಿತ ಮತ್ತೆ ಬರಬೇಕೆಂದು ಮತದಾರರು ಬಯಸಿದ್ದಾರೆ ಹೋದ ಕಡೆಯಲ್ಲೆಲ್ಲ ಜನ ತೋರಿದ ಅಭಿಮಾನ ಅದ್ಭುತವಾಗಿತ್ತು. ಕರ್ನಾಟಕದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.
  ಬಿ.ವೈ.ವಿಜಯೇಂದ್ರ ಮಾತನಾಡಿ, ಈ ಚುನಾವಣೆ ಬಿಜೆಪಿಯ ಬಲವನ್ನು ವೃದ್ಧಿಸಲಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯಂತೆ ನಾವು 400ರ ಗಡಿ ದಾಟಲಿದ್ದೇವೆ. ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಇನ್ನಷ್ಟು ಹೆಚ್ಚಾಗಲಿದೆ. ವಿಪಕ್ಷಗಳ ಹಗಲುಗನಸು ಕನಸಾಗಿಯೇ ಉಳಿಯಲಿದೆ. ಮೋದಿ ಅವರು ಮತ್ತೆ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಶಿವಮೊಗ್ಗ ಕ್ಷೇತ್ರದಲ್ಲಿ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ರಾಘಣ್ಣ ಗೆಲುವು ಸಾಧಿಸುವ ವಿಶ್ವಾಸವಿದೆ
  ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಮಹೇಶ್ ಹುಲ್ಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಾಜಿ ರಾಘವೇಂದ್ರ, ಬೆಣ್ಣೆ ಪ್ರವೀಣ, ತೇಜಸ್ವಿನಿ ರಾಘವೇಂದ್ರ, ಪ್ರೇಮಾ ವಿಜಯೇಂದ್ರ, ಸುಭಾಷ್, ಭಗತ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts