| ಗೋಪಾಲಕೃಷ್ಣ ಪಾದೂರು, ಉಡುಪಿ
ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಎರಡು ಬಾರಿ ಎದುರಾಳಿಗಳಾಗಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಎರಡು ದಶಕದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮುಖಾಮುಖಿಯಾಗಿದ್ದಾರೆ.
1994ರಲ್ಲಿ ಜಯಪ್ರಕಾಶ ಹೆಗ್ಡೆ ಜನತಾದಳದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಇದೇ ಅವಧಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು ಗ್ರಾಪಂ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು. 1999 ಮತ್ತು 2004ರಲ್ಲಿ ಹೆಗ್ಡೆ ಪಕ್ಷೇತರರಾಗಿ ಸ್ಪರ್ಧಿಸಿದಾಗ ಕೋಟ ಬಿಜೆಪಿ ಅಭ್ಯರ್ಥಿಯಾಗಿದ್ದರು. ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಪ್ರಸ್ತುತ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿದ್ದು, 2008ರ ಕ್ಷೇತ್ರ ವಿಂಗಡಣೆಯಿಂದ ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿದೆ. ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಹೆಗ್ಡೆ 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಡಿ.ವಿ.ಸದಾನಂದಗೌಡ ವಿರುದ್ಧ ಸೋಲನುಭವಿಸಿದ್ದರು. ಆದರೆ, 2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದರು. 2014ರಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಸೋತಿದ್ದರು. ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ಸದಸ್ಯರಾಗಿ, 3 ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಸಮಾಧಾನ ಶಮನ: ಕೆಲವು ತಿಂಗಳಿಂದ ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆ ಕೂಗು ಜೋರಾಗಿದ್ದು, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾರ್ಯಕರ್ತರು ಅಸಮಾಧಾನಗೊಂಡು, ಗೋ ಬ್ಯಾಕ್ ಚಳವಳಿಯನ್ನೂ ಆರಂಭಿಸಿದ್ದರು. ಹೀಗಾಗಿ ಹೊಸಮುಖಕ್ಕೆ ಮಣೆ ಹಾಕಿರುವ ಹೈಕಮಾಂಡ್ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಹೆಗ್ಡೆಯವರ ಅಧಿಕಾರಾವಧಿಯನ್ನು ಹಾಲಿ ಕಾಂಗ್ರೆಸ್ ಸರ್ಕಾರ ವಿಸ್ತರಿಸಿದಾಗಲೇ ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿತ್ತು.
ಜಾತಿ ಸಮೀಕರಣಕ್ಕೆ ಆದ್ಯತೆ: ಬಿಜೆಪಿ ಮತ್ತು ಕಾಂಗ್ರೆಸ್ ಈ ಬಾರಿ ಜಾತಿ ಸಮೀಕರಣಕ್ಕೆ ಆದ್ಯತೆ ನೀಡಿವೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಗಮನದಲ್ಲಿರಿಸಿ, ಬಿಜೆಪಿ ಪ್ರಬಲ ಬಿಲ್ಲವ ಸಮುದಾಯದ ಕೋಟ ಅವರಿಗೆ ಟಿಕೆಟ್ ನೀಡಿದೆ. ಅದೇ ರೀತಿ, ಜಾತಿ ಲೆಕ್ಕಾಚಾರದಲ್ಲಿ ಬಂಟ ಸಮಾಜದ ಜಯಪ್ರಕಾಶ್ ಹೆಗ್ಡೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಬಿಜೆಪಿಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮೊಗವೀರ ಸಮಾಜದ ಪ್ರಮೋದ್ ಮಧ್ವರಾಜ್ ಅವರಿಗೆ ಪ್ರಚಾರ ಸಮಿತಿ ಜವಾಬ್ದಾರಿ ವಹಿಸಲಾಗಿದೆ.
ಗ್ಯಾರಂಟಿ ವರ್ಸಸ್ ಮೋದಿ: ಎರಡೂ ಪಕ್ಷಗಳು ಹಿರಿಯ ರಾಜಕಾರಣಿಗಳನ್ನು ಅಖಾಡಕ್ಕೆ ಇಳಿಸಿರುವುದರಿಂದ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಈಗಾಗಲೆ ‘ನಮ್ಮ ಜೆಪಿ-ನಮ್ಮ ಎಂಪಿ’ ಅಭಿಯಾನ ಶುರು ಮಾಡಿದೆ. ಹೆಗ್ಡೆಯವರು ಉಡುಪಿ ಗ್ರಾಮಾಂತರ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳ ಕೆಲವು ಭಾಗಗಳಲ್ಲಿ ಪ್ರಭಾವಿ. ಬಿಜೆಪಿಯ ಒಂದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದನ್ನು ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನೆಚ್ಚಿಕೊಂಡಿದ್ದರೆ, ಬಿಜೆಪಿ ಮೋದಿ ಗ್ಯಾರಂಟಿ ಹಾಗೂ ಹಿಂದುತ್ವದ ಮೇಲೆ ಅವಲಂಬಿತವಾಗಿದೆ.
2014ರಿಂದಲೂ ಮೋದಿ ಅಲೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಬಿಜೆಪಿ, ಚಿಕ್ಕಮಗಳೂರು ಕ್ಷೇತ್ರದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಮೇಲ್ನೋಟಕ್ಕೆ ಸಮಬಲದ ಪೈಪೋಟಿ ಅನಿಸಿದರೂ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ 18 ಸಾವಿರ ಮತ, ಉಡುಪಿಯಲ್ಲಿ ಬಿಜೆಪಿ 90 ಸಾವಿರ ಮತಗಳ ಮುನ್ನಡೆಯಲ್ಲಿದೆ. ಜತೆಗೆ ಕ್ಷೇತ್ರದಲ್ಲಿ 2014ರಿಂದಲೂ ಮೋದಿ ಅಲೆಯಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 3.49 ಲಕ್ಷ ಮತ ಅಂತರದಿಂದ ಗೆದ್ದಿದ್ದರು.
ಜಯಪ್ರಕಾಶ್ ಹೆಗ್ಡೆ ಪ್ಲಸ್-ಮೈನಸ್
1. ಆರೋಪಗಳಿಲ್ಲದ ವೈಯಕ್ತಿಕ ವರ್ಚಸ್ಸು
2. ಶಾಸಕ, ಸಚಿವ, ಸಂಸದರಾಗಿ ಅನುಭವಿ
3. ಆಡಳಿತಾತ್ಮಕ ವಿಷಯಗಳಲ್ಲಿ ಪರಿಣತಿ
4. ಅಧಿಕಾರಕ್ಕಾಗಿ ಪಕ್ಷಕ್ಕೆ ಮರಳಿದ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ
ಕೋಟ ಶ್ರೀನಿವಾಸ ಪೂಜಾರಿ ಪ್ಲಸ್-ಮೈನಸ್
1. ಸರಳ ವ್ಯಕ್ತಿತ್ವ, ಜನರೊಂದಿಗೆ ಒಡನಾಟ
2. ಬಿಜೆಪಿ ತಳಮಟ್ಟದ ನಾಯಕ
3. 3 ದಶಕಗಳ ಆಡಳಿತಾತ್ಮಕ ಅನುಭವ
4. ಅಧಿಕಾರ ಅವಧಿಯಲ್ಲಿ ಜನರು ಗುರುತಿಸುವಂಥ ಯೋಜನೆ ಜಾರಿಗೊಳಿಸಿಲ್ಲ
ಗ್ರಾಪಂ ಸದಸ್ಯತ್ವದಿಂದ ಆರಂಭವಾಗಿ ಮಂತ್ರಿವರೆಗೆ, ಜಿಲ್ಲಾಧ್ಯಕ್ಷನಿಂದ ರಾಜ್ಯ ಒಬಿಸಿ ಮೋರ್ಚಾದವರೆಗೆ ಸಂಘಟನೆ ಕೆಲಸ ಮಾಡಿದ್ದೇನೆ. ಸಚಿವನಾಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದ್ದೇನೆ. ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಭವಿಷ್ಯ ನಿರ್ಧರಿಸಲಿದೆ.
| ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಅಭ್ಯರ್ಥಿ
10 ವರ್ಷ ಹಿಂದೆ 20 ತಿಂಗಳು ಸಂಸದನಾಗಿ ಕೆಲಸ ಮಾಡಿದ್ದೆ. ಸೋತಾಗಲು ಜನಸೇವೆ ಮಾಡಿದ್ದೇನೆ. ಹೊಸದಾಗಿ ಜನಸಂಪರ್ಕ ಮಾಡಿಕೊಳ್ಳಬೇಕೆಂದಿಲ್ಲ. ವಿಷಯಾಧಾರಿತ ಚರ್ಚೆಗೆ ಹೋಗುವುದಿಲ್ಲ. ಅಭಿವೖದ್ಧಿ ಬಗ್ಗೆ ಮಾತ್ರ ಚರ್ಚೆ. ಸಮಪಾಲು-ಸಮಬಾಳು ಪ್ರಮುಖ ಅಜೆಂಡಾ.
| ಕೆ. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಅಭ್ಯರ್ಥಿ
Viral video: ಹೆತ್ತೆ ತಾಯಿಯ ಮೇಲೆ ಅಮಾನುಷ ಹಲ್ಲೆ ನಡೆಸಿದ ಮಗ: ಹೆಡೆಮುರಿ ಕಟ್ಟಿದ ಪೊಲೀಸರು!