

ನರೇಂದ್ರ ಎಸ್. ಮರಸಣಿಗೆ ಹೆಬ್ರಿ
ಹೆಬ್ರಿ ಹಾಗೂ ಕುಂದಾಪುರವನ್ನು ಸಂಪರ್ಕಿಸುವ ರಸ್ತೆಯ ಸ್ಪಟಿಕ ಪ್ಲಾಜಾದ ಮುಂಭಾಗದಲ್ಲಿರುವ ಸರ್ಕಾರಿ ಬಸ್ಸು ತಂಗುದಾಣ ಸದ್ಯ ಕುಡುಕರ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಕುಡುಕರಿಂದಾಗಿ ಬಸ್ಸಿಗಾಗಿ ಕಾಯುವ ಮಹಿಳೆಯರು, ಮಕ್ಕಳು, ಶಾಲಾ ವಿದ್ಯಾರ್ಥಿಗಳಿಗೆ ತೀವ್ರ ಕಿರಿಕಿರಿಯಾಗುತ್ತಿದ್ದು, ಅವರು ಬಸ್ಸು ತಂಗುದಾಣದ ಬಹುದೂರದಲ್ಲಿ ನಿಂತುಕೊಂಡು ಬಸ್ಸಿಗಾಗಿ ಕಾಯುತ್ತಾರೆ. ಹೆಬ್ರಿ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ವಹಿಸಿದ್ದರೂ ಕುಡುಕರ ನಿಯಂತ್ರಣ ಸಾಧ್ಯವಾಗುತ್ತಿಲ್ಲ.
ಮುಂಜಾನೆಯೇ ಮದ್ಯ ಸಿಗುತ್ತದೆಯೇ?: ಕುಡುಕರು ಬೆಳಗ್ಗಿನಿಂದ ಸಂಜೆ ತನಕ ಈ ತಂಗುದಾಣದಲ್ಲಿ ತೂರಾಡುತ್ತಿರುತ್ತಾರೆ. ಬಹುತೇಕರು ಬೆಳಗ್ಗೆ ಕೆಲಸಕ್ಕೆ ಹೋಗುವಾಗಲೇ ಮದ್ಯ ಸೇವಿಸಿ ಹೋಗುತ್ತಾರೆ. ಬೆಳಗ್ಗಿನಿಂದಲೇ ಕುಡುಕರ ಸಂಖ್ಯೆಯನ್ನು ಗಮನಿಸುವಾಗ ಸಾರ್ವಜನಿಕ ವಲಯದಲ್ಲಿ ಬೆಳಗ್ಗಿನಿಂದಲೇ ಹೆಬ್ರಿಯ ಪೇಟೆಯಲ್ಲಿ ಮದ್ಯ ಸಿಗುತ್ತದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಒಂದು ವೇಳೆ ಸಿಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಏಕೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬುದು ಇಲ್ಲಿನ ಜನತೆಯ ಪ್ರಶ್ನೆಯಾಗಿದೆ.
ಸಾರ್ವಜನಿಕರ ಒತ್ತಾಯದ ಮೇರೆಗೆ ಕುಡುಕರು ಮಲಗಲು ಸಾಧ್ಯವಾಗದಂತೆ ಕಬ್ಬಿಣದ ಸರಳುಗಳನ್ನು ಅಳವಡಿಸಿ ಕೇವಲ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಹೆಬ್ರಿ ಪಂಚಾಯಿತಿ ವ್ಯವಸ್ಥೆಯನ್ನು ಮಾಡಿತ್ತು. ಇದಕ್ಕೆಲ್ಲ ಕ್ಯಾರೇ ಎನ್ನದ ಕುಡುಕರು ನೇರವಾಗಿ ನೆಲದ ಮೇಲೆ ಬಿದ್ದುಕೊಳ್ಳುತ್ತಿದ್ದಾರೆ. ಪಂಚಾಯಿತಿ ಸಾರ್ವಜನಿಕ ಹಿತಕ್ಕಾಗಿ ಸೂಕ್ತ ವ್ಯವಸ್ಥೆ, ಅಗತ್ಯ ಕ್ರಮವನ್ನು ಕೈಗೊಂಡರೂ ಅದು ಪ್ರಯೋಜನಕ್ಕೆ ಬಂದಿಲ್ಲ.
ಮಹಿಳೆಯರು, ಮಕ್ಕಳು ಸುಳಿಯುವುದಿಲ್ಲ: ಕುಡುಕರ ಅಟಾಟೋಪವನ್ನು ನೋಡುವಾಗ ಮಹಿಳೆಯರು ಸಣ್ಣ ಮಕ್ಕಳು ಹತ್ತಿರ ಸುಳಿಯುವುದಿಲ್ಲ. ಬಸ್ಸಿಗಾಗಿ ಕಾಯುವಾಗ ಕುಡುಕರಿಂದ ದೂರವಿರಲು ಅಂಗಡಿ ಮುಂಗಟ್ಟು ಬಳಿ ನಿಲ್ಲುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳಿಗೆ ಕೂಡ ಇದು ಸಮಸ್ಯೆಯಾಗಿ ಪರಿಣಮಿಸಿದೆ.
ಸಾರ್ವಜನಿಕರ ಬೇಡಿಕೆಯಂತೆ ಬಸ್ಸು ತಂಗುದಾಣವನ್ನು ಸ್ಥಳಾಂತರಿಸಿ ಸರಿಯಾದ ಜಾಗದಲ್ಲಿ ಸುಸಜ್ಜಿತ ಬಸ್ಸು ತಂಗುದಾಣ ನಿರ್ಮಾಣ ಮಾಡುವಂತೆ ಜನರ ಬೇಡಿಕೆ ಇದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸಬೇಕಾಗಿದೆ.
ಬಹುತೇಕ ಕೂಲಿ ಕಾರ್ಮಿಕರು ಬೆಳ್ಳಂಬೆಳಗ್ಗೆಯೇ ಮದ್ಯಪಾನ ಮಾಡಿ ಕೂಲಿ, ಕಟ್ಟಡ ಕೆಲಸಕ್ಕೆ ತೆರಳುತ್ತಾರೆ. ಇದರಿಂದಾಗಿ ಕೆಲಸದ ಸ್ಥಳಗಳಲ್ಲಿ ಅಪಾಯಗಳು ಸಂಭವಿಸಿದ ಸಾಕಷ್ಟು ಉದಾಹರಣೆಗಳಿವೆ. ದಯವಿಟ್ಟು ನಿಗದಿತ ಸಮಯದಲ್ಲಿ ಮಾತ್ರವೇ ಮದ್ಯದ ಅಂಗಡಿಗಳು ತೆರೆಯಲಿ. ಈ ರೀತಿಯ ಬೆಳವಣಿಗೆಯಿಂದ ಬಡ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂಜಾನೆ ಎಲ್ಲೂ ಮದ್ಯ ವಿತರಿಸದಂತೆ ಅಧಿಕಾರಿಗಳು ಕ್ರಮ ವಹಿಸಬೇಕೆನ್ನುವುದು ಸ್ಥಳೀಯ ಮಹಿಳೆಯರ ಆಗ್ರಹ.
ಹೊರ ರಾಜ್ಯದ ಕೂಲಿ ಕಾರ್ಮಿಕರೇ ಹೆಚ್ಚಾಗಿ ಈ ಬಸ್ಸು ತಂಗುದಾಣದಲ್ಲಿ ಬೀಡುಬಿಡುತ್ತಾರೆ. ಅಲ್ಲಲ್ಲಿ ಕೆಲವು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮದ್ಯ ಸೇವನೆ ಮಾಡಿ ಬೇಕಾಬಿಟ್ಟಿ ವರ್ತಿಸುತ್ತಾರೆ. ಇನ್ನು ಕೆಲವರು ನಡು ರಸ್ತೆಯಲ್ಲೇ ನಡೆದುಕೊಂಡು ಹೋಗಿ ಅಪಘಾತಗಳಿಗೆ ಕಾರಣವಾಗಿದ್ದಾರೆ. ಮುಂದಿನ ದಿನಗಳಲ್ಲಿ ಕುಡುಕರ ಉಪಟಳವನ್ನು ನಿಯಂತ್ರಣ ಮಾಡಲು ಸಂಬಂಧಪಟ್ಟವರು ಮುಂದಾಗಬೇಕೆಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸೂಕ್ತ ಕ್ರಮವನ್ನು ಜರಗಿಸುತ್ತೇನೆ. ಈಗಾಗಲೇ ಕಾರ್ಕಳದ ಆಯಕಟ್ಟಿನ ಜಾಗಗಳಿಗೆ ರೈಡ್ ಮಾಡಿ ದಂಡ ವಿಧಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿಯಂತೆ ಕೆಲಸ ಮಾಡಲಾಗುವುದು. -ಹನುಮಂತಪ್ಪ, ಇನ್‌ಸ್ಪೆಕ್ಟರ್, ಅಬಕಾರಿ ಕಾರ್ಕಳ ವಿಭಾಗ.
ಹೊಸದಾಗಿ ಬಸ್ಸು ತಂಗುದಾಣ ನಿರ್ಮಿಸಿದ ಮೇಲೆ ಸ್ವಲ್ಪಮಟ್ಟಿಗೆ ಕುಡುಕರ ಹಾವಳಿ ತಪ್ಪಿತ್ತು. ಮಹಿಳೆಯರು ಮಕ್ಕಳು ಈ ಬದಿ ಬರಲು ಹೆದರುತ್ತಾರೆ.ಬಸ್ಸು ತಂಗುದಾಣಗಳು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ತಾಣವಾಗಬೇಕೇ ಹೊರತು ಕುಡುಕರ ತಾಣವಾಗಬಾರದು. ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡಲಾಗುತ್ತದೆ. ಈ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೆ ಮಾತ್ರವೇ ಸಮಸ್ಯೆ ಪರಿಹರಿಸಲು ಸಾಧ್ಯ. -ಮಾಲತಿ, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯೆ
ಜನರ ಬೇಡಿಕೆಯಂತೆ ಬಸ್ಸು ತಂಗುದಾಣವನ್ನು ನವೀಕರಿಸಲಾಗಿದೆ. ಹಿಂದೆ ಮಲಗುವಷ್ಟು ಸ್ಥಳಾವಕಾಶ ಇತ್ತು. ಆದರೆ ಈಗ ಅದನ್ನು ತೆರವುಗೊಳಿಸಿ ಕೇವಲ ಕುಳಿತುಕೊಳ್ಳಲು ಮಾತ್ರವೇ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೂ ಸಮಸ್ಯೆ ಹೆಚ್ಚಾಗಿದೆ. ಹೆಬ್ರಿಯಲ್ಲಿ ಬೆಳಗ್ಗಿನ ಜಾವವೇ ಕುಡುಕರಿಗೆ ಮದ್ಯ ಪೂರೈಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. -ತಾರಾನಾಥ್ ಎಸ್. ಬಂಗೇರ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ