More

    ಶ್ರೀ ಯಗಟಿ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸಂಪನ್ನ

    ಕಡೂರು: ಇತಿಹಾಸ ಪ್ರಸಿದ್ದ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
    ಬೆಳಗ್ಗೆ 6 ಗಂಟೆಗೆ ದೇವಾಲಯದ ಮೂಲ ವಿಗ್ರಹಕ್ಕೆ ಆಗಮಿಕರಾದ ಪಿ.ಎನ್.ವೀರೇಶ್, ಮತ್ತು ಇಂದ್ರಕುಮಾರ್ ನೇತೃತ್ವದಲ್ಲಿ ರುದ್ರಾಭಿಷೇಕ ನಡೆಸಲಾಯಿತು. ನಂತರ ಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಗಜಾರೋಹಣೋತ್ಸವ, ಕೃಷ್ಣಗಂಧೋತ್ಸವ, ಸಾಂಪ್ರದಾಯಿಕ ಉತ್ಸವಗಳು ನೆರವೇರಿಸಲಾಯಿತು. ಪಿ.ಕೋಡಿಹಳ್ಳಿಯ ಮೂಲ್ವೀಕರು ಶ್ರೀ ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಯನ್ನು ರಥದ ಮಂಟಪಕ್ಕೆ ಕರೆತಂದು ಅಲಂಕೃತ ರಥದಲ್ಲಿ ಸ್ವಾಮಿಯನ್ನು ಪ್ರತಿಷ್ಟಾಪಿಸಲಾಯಿತು. ಬಲಿಪೂಜೆ ನಡೆಸಿದ ನಂತರ ಮಧ್ಯಾಹ್ನ 2 ಗಂಟೆಗೆ ಸಾವಿರಾರು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.
    ರಥ ಎಳೆಯುವ ಸಂದರ್ಭದಲ್ಲಿ ಭಕ್ತರು ಮಲ್ಲಪ್ಪನಿಗೆ ಜೈಕಾರ ಕೂಗುತ್ತಾ ಈ ಬಾರಿ ತಾಲೂಕಿಗೆ ಸಮೃದ್ಧ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸಿ ಬಾಳೆಹಣ್ಣುಗಳನ್ನು ಎಸೆದರೆ, ಮತ್ತೆ ಕೆಲವರು ವೈಯಕ್ತಿಕ ಹರಕೆ ಕಟ್ಟಿಕೊಂಡ ಮಂಡಕ್ಕಿ, ಕಾಳುಮೆಣಸನ್ನು ರಥಕ್ಕೆ ಎರೆಚಿ ತಮ್ಮ ಭಕ್ತಿ ಸಮರ್ಪಿಸಿದರು.
    ರಥಕ್ಕೆ ಎರೆಚಿದ್ದ ಮೆಣಸಿನ ಕಾಳನ್ನು ರೈತರು ಮುಗಿಬಿದ್ದು ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಕಾಳುಮೆಣಸನ್ನು ಮನೆಗಳಲ್ಲಿ ಪೂಜೆ ಸಲ್ಲಿಸಿಕೊಂಡು ತಮ್ಮ ಹೊಲ-ತೋಟಗಳಲ್ಲಿ ಸಮೃದ್ಧವಾಗಿ ಫಸಲು ಬೆಳೆಯುವಂತೆ ಪ್ರಾರ್ಥಿಸಿ ಜಮೀನು, ತೋಟಗಳಿಗೆ ಹಾಕಲಾಗುತ್ತಿದೆ.
    ಸ್ವಾಮಿ ರಥೋತ್ಸವ ನಂತರ ಪಿ.ಕೋಡಿಹಳ್ಳಿಯ ಮೂಲ್ವೀಕರು ಹಾಗೂ ಗ್ರಾಮೀಣ ಭಕ್ತರು ತಮ್ಮ ಸಿಂಗಾರಗೊಂಡ ಪಾನಕದ ಗಾಡಿಗಳನ್ನು ಸ್ವಾಮಿ ದೇವಾಲಯದ ಸಮೀಪ ಮೆರವಣಿಗೆ ನಡೆಸಿ ನಂತರ ರಥದ ಬಳಿ ಬಂದು ಸಾಂಪ್ರಾದಾಯಿಕವಾಗಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸಂಭ್ರಮಿಸಿದರು.
    ಜಾತ್ರಾ ಮಹೋತ್ಸವದಲ್ಲಿ ಬಂದಂತಹ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಯಿತು. ತಹಸೀಲ್ದಾರ್ ಎಂ.ಪಿ.ಕವಿರಾಜ್ ತಾಲೂಕು ಆಡಳಿತದ ಪರವಾಗಿ ರಥಕ್ಕೆ ಪೂಜೆ ಸಲ್ಲಿಸಿದರು. ಯಗಟಿ ಪಿಎಸ್‌ಐ ರಂಗನಾಥ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದ್‌ಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಪುರ ಗ್ರಾಪಂ ಅಧ್ಯಕ್ಷೆ ಸುಮಾ ಮಹೇಶ್, ದೇವಾಲಯ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಪಿ.ಎಂ.ಪ್ರಸನ್ನಕುಮಾರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ವಿ.ಜಯಣ್ಣ, ಜಡೆಯಪ್ಪ, ಗರ್ಜೆ ರಾಜಣ್ಣ, ಪಿ.ಎಂ.ಶಿವುಕುಮಾರ್, ಕೆ.ಜಿ. ಲೋಕೇಶ್ವರ್, ಕೆ.ಎಂ.ಶಾಂತಪ್ಪ, ಕೆ.ವಿ.ಮಲ್ಲೇಶಪ್ಪ , ಪಿ.ಕೋಡಿಹಳ್ಳಿ ಮೂಲ್ವಿಕರು ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts