ಮೊಬೈಲ್ ಕದ್ದು ಆಸ್ಪತ್ರೆಯ ಗ್ಲಾಸ್ ಒಡೆದು 2ನೇ ಬಾರಿ ಕರೊನಾ ಸೋಂಕಿತ ಪರಾರಿ

26Tmk_Corona_Emergency
Published on

ಕಾರವಾರ: ಸೋಮವಾರ ಇಲ್ಲಿನ ಕ್ರಿಮ್ಸ್ ಕೋವಿಡ್ ವಾರ್ಡ್ ನಿಂದ ಮೊಬೈಲ್ ಎಗುರಿಸಿ ಗ್ಲಾಸ್ ಒಡೆದು ಪರಾರಿಯಾಗಿದ್ದ ಕರೊನಾ ಸೋಂಕಿತ ಕಳ್ಳ ಎರಡನೇ ಬಾರಿ ನಾಪತ್ತೆಯಾಗಿ ನಗರದಲ್ಲಿ ತಲ್ಲಣ ಮೂಡಿಸಿದ್ದಾನೆ.

ಸೋಮವಾರ ಓಡಿ ಹೋದವನನ್ನು ಕದ್ರಾದಲ್ಲಿ ಪೊಲೀಸರು ಬಂಧಿಸಿದ್ದರು. ವಿಶೇಷ ಕೋಣೆಯಲ್ಲಿ ಇಟ್ಟಿದ್ದರು. ಮಂಗಳವಾರ ಮಧ್ಯರಾತ್ರಿ ಮತ್ತೆ ಓಡಿದ್ದು, ಬೆಳಗಿನವರೆಗೂ ಪೊಲೀಸರು ನಗರದಾದ್ಯಂತ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಧಾರವಾಡ ಮೂಲದ ರಾಜೇಶ ನಾಯಿಕ ಎಂಬ ಕತರನಾಖ್ ಕಳ್ಳ ಉಡುಪಿ ಪೊಲೀಸರಿಂದ ಬಂಧಿತನಾಗಿದ್ದ. ಧಾರವಾಡ ಪೊಲೀಸರು ತನಿಖೆಗೆ ಪಡೆದಿದ್ದರು‌‌. ಬೈಕ್ ಕಳ್ಳತನದ ತನಿಖೆಗೆ ಶಿರಸಿ ಶಹರ ಠಾಣೆ ಪೊಲೀಸರು ಜೂನ್ 24 ರಂದು ವಶಕ್ಕೆ ಪಡೆದಿದ್ದರು.

ನ್ಯಾಯಾಧೀಶರ ಸೂಚನೆಯಂತೆ ಕರೊನಾ ಪರೀಕ್ಷೆ ನಡೆಸಿದಾಗ ಆತನಲ್ಲಿ ಸೋಂಕು ಖಚಿತವಾಗಿತ್ತು‌. ಇದರಿಂದ ಶಿರಸಿ ನಗರ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. 6 ಜನ ಪೊಲೀಸರು, ನ್ಯಾಯಾಧೀಶರನ್ನು, ನ್ಯಾಯಾಲಯದ ನಾಲ್ವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಆತನನ್ನು ಕಾರವಾರ ಕ್ರಿಮ್ಸ್ ಕರೊನಾ ಆಸ್ಪತ್ರೆಗೆ ಸೇರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net