VIDEO| ಮೆಡಿಕಲ್​ ಕ್ಲೀನಿಕ್​ನಲ್ಲಿ ಸ್ಪೋಟ: 19 ಮಂದಿಯ ದುರ್ಮರಣ, 6 ಜನರ ಸ್ಥಿತಿ ಗಂಭೀರ

Medical Clinic
Published on

ತೆಹ್ರಾನ್​: ಮೆಡಿಕಲ್​ ಕ್ಲೀನಿಕ್​ನಲ್ಲಿ ಸಂಭವಿಸಿದ ಸ್ಪೋಟದಿಂದಾಗಿ 19 ಮಂದಿ ಸಾವಿಗೀಡಾಗಿ, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇರಾನ್​ ರಾಜಧಾನಿ ತೆಹ್ರಾನ್​ ಉತ್ತರ ಭಾಗದಲ್ಲಿ ಮಂಗಳವಾರ ನಡೆದಿದೆ.

ಸ್ಪೋಟಕ್ಕೆ ಅನಿಲ ಸೋರಿಕೆ ಕಾರಣ ಎಂದು ತೆಹ್ರಾನ್​ ಡೆಪ್ಯುಟಿ ಗವರ್ನರ್​ ಹಮೀದ್​ ರೆಜಾ ಅವರು ಮಾಧ್ಯಮ ಹೇಳಿಕೆ ನೀಡಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇನ್ನು ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ಸಹ ಹರಿದಾಡುತ್ತಿವೆ.

ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೀಡುಬಿಟ್ಟಿದ್ದು, ಈಗಾಗಲೇ ಬೆಂಕಿಯನ್ನು ನಂದಿಸಲಾಗಿದೆ ಎಂದು ತೆಹ್ರಾನ್​ ಅಗ್ನಿಶಾಮಕ ಇಲಾಖೆಯ ವಕ್ತಾರ ಜಲಾಲ್​ ಮಲೆಕಿ ಮಾಹಿತಿ ನೀಡಿದ್ದಾರೆ.

ಸ್ಪೋಟಗೊಂಡ ಸಮಯದಲ್ಲಿ ಕ್ಲೀನಿಕ್​ನಲ್ಲಿ ಒಟ್ಟು 25 ಮಂದಿ ಇದ್ದರು ಎಂದು ತಿಳಿದುಬಂದಿದೆ.

ಕಳೆದವಾರ ತೆಹ್ರಾನ್​ ಸೂಕ್ಷ್ಮ ಮಿಲಿಟರಿ ಪ್ರದೇಶದ ಸಮೀಪ ಸ್ಪೋಟವೊಂದು ಸಂಭವಿಸಿತ್ತು. ಅನಿಲ ಸಂಗ್ರಹಣೆಯ ಪ್ರದೇಶದಲ್ಲಿ ಟ್ಯಾಂಕರ್​ನಿಂದ ಗ್ಯಾಸ್​ ಲೀಕ್​ ಆಗಿ ಸ್ಪೋಟ ಸಂಭವಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿತ್ತು. ಆದರೆ, ಘಟನೆಯಲ್ಲಿ ಯಾವ ಪ್ರಾಣ ಹಾನಿ ಸಂಭವಿಸಿರಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net