

ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೀರೋ. ಆದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೇ ಡೈರೆಕ್ಟರ್. ಹೀಗೆಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದು, ಮುಂದಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಇಂದು ತುಮಕೂರಿನಲ್ಲಿ ಮಾತನಾಡಿರುವ ಶ್ರೀರಾಮುಲು ಈ ವಿಷಯ ಬಹಿರಂಗಪಡಿಸಿದ್ದಾರೆ.
ಹೀರೋ-ಡೈರೆಕ್ಟರ್ ಎಂದ ಮಾತ್ರಕ್ಕೆ ಯಾವುದೋ ಹೊಸ ಸಿನಿಮಾದ ವಿಚಾರ ಎಂದು ಕಣ್ಣರಳಿಸಿ ನೋಡುವಂತಿಲ್ಲ. ಏಕೆಂದರೆ ಶ್ರೀರಾಮುಲು ಹೀಗೆ ಹೇಳಿರುವುದು ಮುಂದಿನ ಚುನಾವಣೆಯ ದೃಷ್ಟಿಯಲ್ಲಿ. ಮುಂದಿನ ಚುನಾವಣೆಯಲ್ಲಿ ರಾಜಕೀಯ ತಂತ್ರಗಳು ಹೇಗಿರಲಿವೆ ಎಂಬುದನ್ನು ಅವರು ಸಿನಿಮೀಯವಾಗಿಯೇ ಹೇಳಿದ್ದಾರೆ.
ಮುಂದಿನ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯುತ್ತದೆ. ಇದನ್ನು ನಮ್ಮ ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಹಾಗಂತ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದ್ದಾರೆ ಅಂತಲ್ಲ. ಸಿನಿಮಾದಲ್ಲಿ ಹೀರೋ ಎಷ್ಟೇ ಒಳ್ಳೆಯ ಆ್ಯಕ್ಟ್ ಮಾಡಿ ಜನರನ್ನು ಆಕರ್ಷಣೆ ಮಾಡಿದರೂ ಅದರಲ್ಲಿ ನಿರ್ದೇಶಕರ ಪಾತ್ರ ಮುಖ್ಯವಾಗಿರುತ್ತದೆ.
ಸಿನಿಮಾದಲ್ಲಿ ಹೀರೋಗಿಂತ ದೊಡ್ಡ ಶಕ್ತಿ ನಿರ್ದೇಶಕರಿಗೆ ಇರುತ್ತದೆ. ಹಾಗಾಗಿ ನಮ್ಮ ಪಾರ್ಟಿಯಲ್ಲಿ ಯಡಿಯೂರಪ್ಪನವರಿಗೆ ದೊಡ್ಡ ಶಕ್ತಿ ಇದೆ. ಅವರ ಮಾರ್ಗದರ್ಶನದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.