

ಗದಗ: ಕಾರು ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ, ಮಗ ಹಾಗೂ ಮೊಮ್ಮಗಳು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೊಬ್ಬರು ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಹುಬ್ಬಳ್ಳಿಯ ಶಿವಾನಂದಯ್ಯ ಶಿವಲಿಂಗಯ್ಯ ಹಿರೇಮಠ (45), ಅನಸೂಯಾ ಶಿವಲಿಂಗಯ್ಯ ಹಿರೇಮಠ (65), ನಮಸ್ವಿ ಶಿವಾನಂದಯ್ಯ ಹಿರೇಮಠ (6) ಮೃತ ದುರ್ದೈವಿಗಳು. ಗಿರಿಜಾ ಶಿವಾನಂದಯ್ಯ ಹಿರೇಮಠ ಹಾಗೂ ಕಾರು ಚಾಲಕ ಸಂತೋಷ ಬಸವರಾಜ ರಾವಳ್ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ.
ವಿಆರ್ಎಲ್ ಸಿಬ್ಬಂದಿಯಾಗಿರುವ ಶಿವಾನಂದಯ್ಯ ಹಿರೇಮಠ ಹಾಗೂ ಕುಟುಂಬ ಸದಸ್ಯರೊಂದಿಗೆ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವರ ದರ್ಶನಕ್ಕಾಗಿ ತೆರಳಿದ್ದರು. ದರ್ಶನ ಪಡೆದುಕೊಂಡು ಮರಳಿ ಮುಂಡರಗಿ ಕಡೆಯಿಂದ ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದರು. ಡಂಬಳ ಸಮೀಪದಲ್ಲಿ ಮುಂದೆ ಹೊರಟಿದ್ದ ಟ್ರ್ಯಾಕ್ಟರ್ನ ಟ್ರೇಲರ್ಗೆ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಡರಗಿ ಠಾಣೆ ಸಿಪಿಐ ಸುನೀಲ್ ಸವದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತಾಪ: ಶಿವಾನಂದಯ್ಯ, ಗಿರಿಜಾ ಹಾಗೂ ನಮಸ್ವಿ ನಿಧನಕ್ಕೆ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ಎಂಡಿ ಆನಂದ ಸಂಕೇಶ್ವರ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.