

ಬೆಂಗಳೂರು: ಪೊಲೀಸರ ಭ್ರಷ್ಟಾಚಾರ ತಡೆಗೆ ಅವರಿಗೆ ಬಾಡಿ ಓನ್ ಕ್ಯಾಮರಾ ನೀಡಬೇಕು ಎಂಬ ಸಾರ್ವಜನಿಕರ ಒತ್ತಾಯಕ್ಕೆ ಇದೀಗ ಮತ್ತಷ್ಟು ಇಂಬು ಸಿಕ್ಕಿದೆ. ಈಗಾಗಲೇ ಒಂದಷ್ಟು ಟ್ರಾಫಿಕ್ ಪೊಲೀಸರಿಗೆ ಬಾಡಿ ಓನ್ ಕ್ಯಾಮರಾ ನೀಡಲಾಗಿದ್ದರೂ, ಇನ್ನಷ್ಟು ಮಂದಿಗೆ ಬಾಡಿ ಓನ್ ಕ್ಯಾಮರಾ ಕೊಡಲಾಗುವುದು. ಸದ್ಯದಲ್ಲೇ ಶೇ. 50ರಷ್ಟು ಟ್ರಾಫಿಕ್ ಪೊಲೀಸರಿಗೆ ಬಾಡಿ ಓನ್ ಕ್ಯಾಮರಾ ಒದಗಿಸಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಲೈವ್ ಬಂದ ಅವರು ಸಾರ್ವಜನಿಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿ ಈ ವಿಷಯ ತಿಳಿಸಿದರು. ಮತ್ತಷ್ಟು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪೊಲೀಸರು ಸಾರ್ವಜನಿಕರ ಜತೆ ಕಟುವಾಗಿ ವರ್ತಿಸಬಾರದು. ಕಾನೂನು ಉಲ್ಲಂಘಿಸಿದವರೊಂದಿಗೆ ಸೌಜನ್ಯದಿಂದಲೇ ವರ್ತಿಸಿ ದಂಡ ವಿಧಿಸಬೇಕು. ಒಂದುವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಸೂಕ್ತ ಕಾನೂನುಕ್ರಮ ಜರುಗಿಸಬೇಕು. ಸೌಜನ್ಯದಿಂದ ವರ್ತಿಸುವ ಕುರಿತು ಪೊಲೀಸರಿಗೆ ಅದರಲ್ಲೂ ಹೊಸದಾಗಿ ನೇಮಕಗೊಂಡವರಿಗೆ ಸಾಫ್ಟ್ ಸ್ಕಿಲ್ಸ್ ಟ್ರೇನಿಂಗ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪೊಲೀಸರು ಸುಖಾಸುಮ್ಮನೆ ತಡೆದು ಪರಿಶೀಲಿಸುತ್ತಾರೆ ಎಂದು ಸಾರ್ವಜನಿಕರೊಬ್ಬರು ದೂರಿದ್ದಕ್ಕೆ, ಸಾಮಾನ್ಯವಾಗಿ ಪೊಲೀಸರು ಎರಡು ರೀತಿಯ ತಪಾಸಣೆ ಮಾಡುತ್ತಾರೆ ಎಂದರು ರವಿಕಾಂತೇಗೌಡ. ಸಾಮಾನ್ಯವಾಗಿ ಕಣ್ಣಿಗೆ ಕಾಣಿಸುವಂಥ ಸಂಚಾರ ನಿಯಮ ಉಲ್ಲಂಘನೆ ಇರದಿದ್ದರೆ ತಡೆಯಬಾರದು. ಆದರೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಹಾಗೂ ಹಳೆಯ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ತಡೆದು ತಪಾಸಣೆ ನಡೆಸಲಾಗುತ್ತದೆ ಎಂಬುದನ್ನೂ ತಿಳಿಸಿದರು.