

ನವದೆಹಲಿ: ಏಕಬಳಕೆ (ಸಿಂಗಲ್ ಯೂಸ್) ಅಂದರೆ ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಕಪ್, ಪ್ಲೇಟ್ ಹಾಗೂ ಸ್ಟ್ರಾಗಳ ಉತ್ಪಾದನೆಯನ್ನೇ ಬಂದ್ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉಪಯೋಗ ನಿಷೇಧಿಸಿ ಸರ್ಕಾರ ಕ್ರಮಜರುಗಿಸಿದಾಗೆಲ್ಲ ಅವುಗಳ ಉತ್ಪಾದನೆಯನ್ನೇ ಏಕೆ ನಿಷೇಧಿಸಬಾರದು ಎಂದು ಜನರು ಪ್ರಶ್ನಿಸುತ್ತಿದ್ದರು. ಅದಿನ್ನು ಜಾರಿಯಾಗುವ ಭರವಸೆ ಈ ಘೋಷಣೆಯಿಂದ ಉಂಟಾಗಿದೆ.
ಭಾರತವನ್ನು ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಂದ ಮುಕ್ತಗೊಳಿಸುವ ಸಲುವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ಈ ವರ್ಗಕ್ಕೆ ಸೇರುವ ಸ್ಟ್ರಾ, ಕಪ್, ಪ್ಲೇಟ್, ಟ್ರೇ, ಪಾಲಿಸ್ಟಿರೀನ್ ಮುಂತಾದವುಗಳ ಉತ್ಪಾದನೆಯನ್ನೇ ನಿಲ್ಲಿಸಲಿದೆ. ಖರೀದಿ ಬಳಿಕ ಒಮ್ಮೆ ಮಾತ್ರ ಬಳಸಿ ವರ್ಜಿಸುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಏಕಬಳಕೆ ಉತ್ಪನ್ನ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದ್ದು, 2022ರ ಜುಲೈ 1ರಿಂದ ಈ ನಿಷೇಧ ಜಾರಿಗೆ ಬರಲಿದೆ ಎಂಬುದನ್ನೂ ತಿಳಿಸಿದೆ.
ಈ ನಡುವೆ ಪ್ಲಾಸ್ಟಿಕ್ ಕವರ್ (ಪಾಲಿಥೀನ್ ಬ್ಯಾಗ್) ದಪ್ಪವನ್ನು ಕೂಡ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು, ಅದನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಿರುವುದಾಗಿ ಹೇಳಿದೆ. ಮೊದಲಿಗೆ ಪಾಲಿಥೀನ್ ಬ್ಯಾಗ್ಗಳ ಥಿಕ್ನೆಸ್(ದಪ್ಪ) 50 ಮೈಕ್ರಾನ್ನಿಂದ 120 ಮೈಕ್ರಾನ್ಗೆ ಹೆಚ್ಚಿಸಿರುವುದಾಗಿ ಸರ್ಕಾರ ತಿಳಿಸಿದೆ. ಮೊದಲ ಹಂತದಲ್ಲಿ 75 ಮೈಕ್ರಾನ್ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಕವರ್ಗಳನ್ನು ಸೆಪ್ಟೆಂಬರ್ 30ರಿಂದ ನಿಷೇಧಿಸಲಾಗುವುದು ಎಂದಿರುವ ಸರ್ಕಾರ, ಎರಡನೆಯ ಹಂತದಲ್ಲಿ 120 ಮೈಕ್ರಾನ್ಗಿಂತ ಕಡಿಮೆ ದಪ್ಪದ ಕವರ್ಗಳನ್ನು 2022ರ ಡಿ.31ರಿಂದ ನಿಷೇಧಿಸಲಾಗುವುದು ಎಂದು ತಿಳಿಸಿದೆ.
ಆದರೆ ಈ ಥಿಕ್ನೆಸ್ ಗೈಡ್ಲೈನ್ಸ್ ಕಾಂಪೊಸ್ಟೇಬಲ್ ಪ್ಲಾಸ್ಟಿಕ್ನಿಂದ ಮಾಡಿದ ಕ್ಯಾರಿಬ್ಯಾಗ್ಗಳಿಗೆ ಅನ್ವಯಿಸುವುದಿಲ್ಲ ಎಂದೂ ಸರ್ಕಾರ ಹೇಳಿದೆ. ಅಂಥ ಬ್ರ್ಯಾಂಡ್ಗಳ ಮಾಲೀಕರು ಆ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಅವರಿಂದ ಪ್ರಮಾಣಪತ್ರ ಪಡೆದಿರಬೇಕು ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)