

ಬೆಂಗಳೂರು: ಬಿಎಂಟಿಸಿ ಬಸ್ ಬ್ರೇಕ್ ವಿಫಲಗೊಂಡು ಸರಣಿ ಅಪಘಾತ ನಡೆದಿರುವ ಪ್ರಕರಣ ಭಾನುವಾರ ಬೆಳಗ್ಗೆ ಕಾರ್ಪೋರೇಷನ್ ಸಿಗ್ನಲ್ ಬಳಿ ನಡೆದಿದೆ.
ಬಿಎಂಟಿಸಿ ಚಾಲಕ ಹುಸೇನ್ ಸಾಬ್ ಬೆಳಗ್ಗೆ 10:30ರ ಸಮಯದಲ್ಲಿ ಶಿವಾಜಿನಗರದಿಂದ ತಾವರೆಕೆರೆ ಕಡೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಕಾರ್ಪೋರೇಷನ್ ಸರ್ಕಲ್ ಬಳಿ ಬ್ರೇಕ್ ವಿಫಲವಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಬಸ್ ಮುಂಬದಿ ನಿಂತಿದ್ದ ಟಾಟಾ ನೆಕ್ಸಾನ್ ಕಾರಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಕಾರ್ ಆಟೋ ಹಾಗೂ ಮುಂಬದಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತಗಳು ಸಂಭವಿಸಿವೆ.
ಆಟೋದಲ್ಲಿದ್ದ ಒಬ್ಬರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಹಲಸೂರು ಗೇಟ್ ಸಂಚಾರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಪಘಾತದಿಂದ ಕಾರ್ಪೋರೇಷನ್ ಜಂಕ್ಷನ್ನಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.