ವೈಟ್​ಟಾಪಿಂಗ್​ ರಸ್ತೆಯಲ್ಲಿ "ಫೈರ್​ ಹೈಡ್ರೆಂಟ್​' ವ್ಯವಸ್ಥೆ

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೃಷ್ಣ ಬೈರೇಗೌಡ ಮಾಹಿತಿ
  • ಟ್ಯಾಂಕ್​ಬಂಡ್​, ಆರ್​.ಟಿ. ರಸ್ತೆ ರಸ್ತೆಗಳ ಸಾರ್ವಜನಿಕರ ಸಂಚಾರಕ್ಕೆ ಮುಕ್ತ

ವಿಜಯವಾಣಿ ಸುದ್ದಿಜಾಲ ಬೆಂಗಳೂರು


ನಗರ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವೈಟ್​ ಟಾಪಿಂಗ್​ ರಸ್ತೆಯಲ್ಲಿ ಪ್ರಥಮ ಬಾರಿಗೆ "ಫೈರ್​ ಹೈಡ್ರೆಂಟ್​' ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರಿಂದ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ತ್ವರಿತವಾಗಿ ಬೆಂಕಿ ನಂದಿಸುವ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಕೇಂದ್ರ ಪಾಲಿಕೆ ವ್ಯಾಪ್ತಿಯ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಟ್ಯಾಂಕ್​ಬಂಡ್​ ರಸ್ತೆ ಹಾಗೂ ರಂಗಸ್ವಾಮಿ ಟೆಂಪಲ್​ ರಸ್ತೆಗಳಲ್ಲಿ (ಆರ್​.ಟಿ. ಸ್ಟ್ರೀಟ್​) ನಿರ್ಮಿಸಿರುವ ವೈಟ್​ಟಾಪಿಂಗ್​ ರಸ್ತೆಗಳನ್ನು ಜನಸಂಚಾರಕ್ಕೆ ಮುಕ್ತಗೊಳಿಸಿ  ಮಾತನಾಡಿದರು.
ಭವಿಷ್ಯದಲ್ಲಿ ಪದೇಪದೆ ರಸ್ತೆ ಅಗೆಯುವ ಪರಿಸ್ಥಿತಿಯನ್ನು ತಪ್ಪಿಸಲು ಜಲಮಂಡಳಿಯಿಂದ ನೀರು ಸರಬರಾಜು ಹಾಗೂ ಒಳಚರಂಡಿ ಮಾರ್ಗಗಳ ವ್ಯವಸ್ಥೆ, ಸಮಗ್ರ ಪಾದಚಾರಿ ಮಾರ್ಗ ನಿಮಾರ್ಣ ಮತ್ತು ಯುಟಿಲಿಟಿ ಡಕ್ಟ್​ ಜಾಲವನ್ನು ಏಕಕಾಲದಲ್ಲಿ ಅಳವಡಿಸಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಮೊದಲ ಹಂತದಲ್ಲಿ ಒಟ್ಟು 196 ಕಿ.ಮೀ. ವೈಟ್​ ಟಾಪಿಂಗ್​ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 2ನೇ ಹಂತದಲ್ಲಿ 120 ಕಿ.ಮೀ. ರಸ್ತೆ ಕಾಮಗಾರಿಯ ಪೈಕಿ, 60 ಕಿ.ಮೀ ಪೂರ್ಣಗೊಂಡಿದ್ದು, ಬಾಕಿ 60 ಕಿ.ಮೀ. ಕಾಮಗಾರಿಯನ್ನು ಡಿಸೆಂಬರ್​ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. 3ನೇ ಹಂತದಲ್ಲಿ 3 ಸಾವಿರ ಕೋಟಿ ರೂ. ವೆಚ್ಚದಲ್ಲಿ 250 ಕಿ.ಮೀ. ಹೊಸದಾಗಿ ವೈಟ್​ ಟಾಪಿಂಗ್​ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಡಿಸೆಂಬರ್​ ಒಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ವೈಟ್​ ಟಾಪಿಂಗ್​ ರಸ್ತೆ 25 ವರ್ಷಗಳಿಗೂ ಹೆಚ್ಚು ಬಾಳಿಕೆ ಬರುತ್ತದೆ. ಇದರಿಂದ ಸರ್ಕಾರದ ನಿರ್ವಹಣಾ ವೆಚ್ಚವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಎಲ್ಲೆಡೆ ಕಾಮಗಾರಿಗಳಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ುಟ್​ಪಾತ್​ ಮೇಲಿನ ಶೌಚಗೃಹ ತೆರವು:
ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಆಧುನಿಕ ವಿನ್ಯಾಸದ ಶೌಚಗೃಹಗಳನ್ನು ನಿರ್ಮಿಸಿ ನಗರದ ಇತರ ಭಾಗಗಳಲ್ಲಿಯೂ ಇದೇ ಮಾದರಿಯನ್ನು ಅಳವಡಿಸಲಾಗುವುದು. ಪಾದಚಾರಿ ಮಾರ್ಗಗಳ ಮೇಲೆ ನಿಮಾರ್ಣವಾಗಿರುವ ಶೌಚಗೃಹಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ವಿಶೇಷ ಆಯುಕ್ತ ನಿತೀಶ್​, ಆಯುಕ್ತ ಜಗದೀಶ್​, ಅಪರ ಆಯುಕ್ತ ವೆಂಕಟಾಚಲಪತಿ, ಮುಖ್ಯ ಅಭಿಯಂತರರಾದ ವಿಜಯ್​ ಕುಮಾರ್​ ಹರಿದಾಸ್​, ಮಾದೇಶ್​ ಇತರರಿದ್ದರು.

ಗಾಂಧಿನಗರ ಹಾಗೂ ಮೆಜೆಸ್ಟಿಕ್​ ಪ್ರದೇಶವು ನಗರದ ಅತ್ಯಂತ ಹಳೆಯ ಭಾಗವಾಗಿದ್ದು, ಹಲವು ವರ್ಷಗಳಿಂದ ಈ ಭಾಗದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ರೀತಿಯ ಆಧುನಿಕ ರಸ್ತೆಗಳನ್ನು ಇತರೆ ಪ್ರದೇಶಗಳಲ್ಲಿಯೂ ಅಭಿವೃದ್ಧಿಪಡಿಸಲಾಗುವುದು.

— ದಿನೇಶ್​ ಗುಂಡೂರಾವ್​, ಶಾಸಕ


ಪ್ರಥಮ "ಫೈರ್​ ಹೈಡ್ರೆಂಟ್​' ವ್ಯವಸ್ಥೆ


"ಬೆಂಗಳೂರು ಪೇಟೆ' ಪ್ರದೇಶದ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನಗಳ ಪ್ರವೇಶಕ್ಕೆ ತೀವ್ರ ಅಡಚಣೆ ಎದುರಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಮತ್ತು ತಕ್ಷಣದ ತುರ್ತು ಸ್ಪಂದನೆಯನ್ನು ಖಚಿತಪಡಿಸಿಕೊಳ್ಳಲು ಆರ್​.ಟಿ. ರಸ್ತೆಯಲ್ಲಿ ಪ್ರಪ್ರಥಮವಾಗಿ ಅತ್ಯಾಧುನಿಕ "ಫೈರ್​ ಹೈಡ್ರೆಂಟ್​' ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net