ಆ.15ರೊಳಗೆ ಮೆಟ್ರೋ ಗುಲಾಬಿ ಮಾರ್ಗ ಶುರು?| metro

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ವೇಗದ ಪ್ರಮಾಣಪತ್ರ ನೀಡಿದ ಆರ್​ಡಿಎಸ್​ಒ
  • ಬನ್ನೇರುಘಟ್ಟ ರಸ್ತೆಯ ಸಂಚಾರಸಿಕ್ಕಿ ಮುಕ್ತಿ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಬನ್ನೇರುಘಟ್ಟ ರಸ್ತೆಯಲ್ಲಿನ ಟ್ರಾಫಿಕ್​ ಕಿರಿಕಿರಿಗೆ ಮುಕ್ತಿ ಸಿಗುವ ದಿನಗಳು ಹತ್ತಿರವಾಗುತ್ತಿವೆ. ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ರೈಲುಗಳಿಗೆ ರಿಸರ್ಚ್​ ಡಿಸೈನ್ಸ್​ ಆ್ಯಂಡ್​ ಸ್ಟ್ಯಾಂಡರ್ಡ್ಸ್​ ಆರ್ಗನೈಸೇಷನ್​ (ಆರ್​ಡಿಎಸ್​ಒ) ವೇಗ ಪ್ರಮಾಣಪತ್ರ ನೀಡಿರುವುದು ಜನರ ನಿರೀಕ್ಷೆಯನ್ನು ಬಲಪಡಿಸಿದೆ. ಆ. 15ರೊಳಗೆ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭವಾಗುವ ನಿರೀೆ ಇದೆ.
ಬನ್ನೇರುಘಟ್ಟ ರಸ್ತೆ, ಕಾಳೇನ ಅಗ್ರಹಾರ, ಹುಳಿಮಾವು, ಜಯದೇವ ಆಸ್ಪತ್ರೆ, ತಾವರೆಕೆರೆ ಭಾಗಗಳಲ್ಲಿ ವಾಸಿಸುವ ಜನರು ವರ್ಷಗಳಿಂದ ಮೆಟ್ರೋ ಸೇವೆಗಾಗಿ ಕಾಯುತ್ತಿದ್ದಾರೆ. ಐಐಎಂ ಬೆಂಗಳೂರು, ಜಯದೇವ ಆಸ್ಪತ್ರೆ, ಫೋರ್ಟಿಸ್​ ಆಸ್ಪತ್ರೆ ಹಾಗೂ ಹಲವು ಶಿಕ್ಷಣ ಸಂಸ್ಥೆಗಳು, ಐಟಿ ಕಚೇರಿಗಳು ಹಾಗೂ ವಾಣಿಜ್ಯ ಕೇಂದ್ರಗಳು ಇದೇ ಮಾರ್ಗದಲ್ಲಿವೆ. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಕೆಲ ಕಿಲೋಮೀಟರ್​ ಸಂಚರಿಸಲು ಗಂಟೆಗಟ್ಟಲೆ ವ್ಯಯಿಸಬೇಕಿದೆ. ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಹಾಗೂ ಖಾಸಗಿ ಉದ್ಯೋಗಿಗಳಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇವರೆಲ್ಲರಲ್ಲಿ ಮೆಟ್ರೋ ಆಶಾಭಾವನೆ ಮೂಡಿಸಿದೆ.
ಗುಲಾಬಿ ಮಾರ್ಗದ ರೈಲುಗಳು ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚಾರ ನಡೆಸಲು ಆರ್​ಡಿಎಸ್​ಒ ಅನುಮತಿ ನೀಡಿದೆ. ಯಾವುದೇ ಹೆಚ್ಚುವರಿ ವೇಗ ಮಿತಿಯನ್ನು ವಿಧಿಸದಿರುವುದು ಬಿಎಂಆರ್​ಸಿಎಲ್​ನ ಆತ್ಮವಿಶ್ವಾಸ ಹೆಚ್ಚಿಸಿದೆ. ಈ ಪ್ರಮಾಣಪತ್ರ ಪಡೆಯುವ ಮುನ್ನ ಏ.28ರಿಂದ ಮೇ 9ರ ವರೆಗೆ 12 ದಿನಗಳ ಕಾಲ ಅಲುಗಾಟ ಪರೀಕ್ಷೆ ಹಾಗೂ ತುರ್ತು ಬ್ರೇಕಿಂಗ್​ ಅಂತರ ಪರೀಕ್ಷೆಗಳನ್ನು ನಡೆಸಲಾಗಿತ್ತು. ರೈಲುಗಳು ಹೆಚ್ಚಿನ ವೇಗದಲ್ಲಿಯೂ ಸುರಕ್ಷಿತವಾಗಿ ಸಂಚರಿಸಬಹುದೇ ಮತ್ತು ತುರ್ತು ಸಂದರ್ಭಗಳಲ್ಲಿ ಎಷ್ಟು ಅಂತರದಲ್ಲಿ ನಿಲ್ಲಬಲ್ಲವು ಎಂಬುದನ್ನು ಈ ಪರೀಕ್ಷೆಗಳ ಮೂಲಕ ಪರಿಶೀಲಿಸಲಾಗುತ್ತದೆ.
ಸಿಎಂಆರ್​ಎಸ್​ ಪರಿಶೀಲನೆ ಮಾತ್ರ ಬಾಕಿ:
ವೇಗ ಪ್ರಮಾಣಪತ್ರ ಲಭಿಸಿದ ಬಳಿಕ ಬಿಎಂಆರ್​ಸಿಎಲ್​ ಈಗ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಗೆ (ಸಿಎಂಆರ್​ಎಸ್​) ಅಗತ್ಯ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ಆರಂಭಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ಕೊತ್ತನೂರು ಡಿಪೋಗೆ ಭೇಟಿ ನೀಡಲಿರುವ ಸಿಎಂಆರ್​ಎಸ್​ ಅಧಿಕಾರಿಗಳು ರೈಲುಗಳ ನಿರ್ವಹಣಾ ಸೌಲಭ್ಯಗಳು, ವಾಷಿಂಗ್​ ಪ್ಲಾಂಟ್​, ವಾಟರ್​ ಜೆಟ್​ ವ್ಯವಸ್ಥೆ, ಪಿಟ್​ ಜ್ಯಾಕ್​ ಸೇರಿ ಹಲವು ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪರಿಶೀಲನೆಯ ಬಳಿಕ ಅಂತಿಮ ಸುರಕ್ಷತಾ ಅನುಮೋದನೆ ದೊರೆತರೆ ಗುಲಾಬಿ ಮಾರ್ಗಕ್ಕೆ ಶ್ರೀ ಹಸಿರುನಿಶಾನೆ ಸಿಗಲಿದೆ.
ಆರು ನಿಲ್ದಾಣಗಳಿಗೆ ಸಂಪರ್ಕ
ಮೊದಲ ಹಂತದಲ್ಲಿ 7.5 ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗವನ್ನು ಸಾರ್ವಜನಿಕ ಸೇವೆಗೆ ತೆರೆಯಲಾಗುತ್ತದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಆರು ನಿಲ್ದಾಣಗಳಿದ್ದು, ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಇದರಿಂದ ನಗರದ ವಿವಿಧ ಭಾಗಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ.
ದೇಶದ 2ನೇ ಅತಿದೊಡ್ಡ ಮೆಟ್ರೋ ನಗರ
ಪಿಂಕ್​ ಲೈನ್​ನ ಮೊದಲ ಹಂತ ಆರಂಭವಾದರೆ ಬೆಂಗಳೂರಿನ ಮೆಟ್ರೋ ಜಾಲದ ಉದ್ದ 103.6 ಕಿ.ಮೀ.ಗೆ ಏರಿಕೆಯಾಗಲಿದೆ. ಇದರೊಂದಿಗೆ 101.43 ಕಿ.ಮೀ. ಉದ್ದದ ಮೆಟ್ರೋ ಜಾಲ ಹೊಂದಿರುವ ಮುಂಬೈಯನ್ನು ಹಿಂದಿಕ್ಕಿ ಬೆಂಗಳೂರು ಮತ್ತೆ ದೇಶದ 2ನೇ ಅತಿದೊಡ್ಡ ಮೆಟ್ರೋ ಜಾಲ ಹೊಂದಿರುವ ನಗರ ಎನಿಸಲಿದೆ.
ರೈಲುಗಳ ಸಿದ್ಧತೆ ಪೂರ್ಣ
ಬಿಇಎಂಎಲ್​ ಈಗಾಗಲೇ ಗುಲಾಬಿ ಮಾರ್ಗಕ್ಕೆ ಆರು ರೈಲುಗಳನ್ನು ಹಸ್ತಾಂತರಿಸಿದೆ. ಇನ್ನಷ್ಟು ರೈಲುಗಳು ಮುಂದಿನ ವಾರಗಳಲ್ಲಿ ಸೇರ್ಪಡೆಯಾಗಲಿವೆ. ಗರಿಷ್ಠ ಪ್ರಯಾಣಿಕರ ಅವಧಿಯಲ್ಲಿ ಐದು ನಿಮಿಷಗಳ ಅಂತರದಲ್ಲಿ ರೈಲು ಸಂಚಾರ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net