ವಿಎಗೆ 100 ಪೌತಿ ಖಾತೆ ಟಾರ್ಗೆಟ್

ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 53 ಕೋಟಿ ಪುಟಗಳನ್ನು ಸ್ಕ್ಯಾನ್
  • 40 ಕೋಟಿ ಪುಟಗಳ ಸ್ಕ್ಯಾನ್, ದಿನಕ್ಕೆ 17,500 ಲಕ್ಷ ಪುಟ ಸ್ಕ್ಯಾನ್, ಫೆಬ್ರವರಿಗೆ ಪೂರ್ಣ
  • ಸರ್ವೇ ಇಲಾಖೆಗೆ ಇನ್ನೂ ಒಂದು ಸಾವಿರ ರೋವರ್ ಖರೀದಿಗೆ ಸರ್ಕಾರ ಒಪ್ಪಿಗೆ
ಬೆಂಗಳೂರು: ರಾಜ್ಯದಲ್ಲಿ 40 ಲಕ್ಷ ಪಹಣಿ ಮೃತರ ಹೆಸರಲ್ಲಿ ಇದ್ದು, ವಾರಸುದಾರರಿಗೆ ವರ್ಗಾವಣೆ ಮಾಡುವ ಸಲುವಾಗಿ ಪೌತಿ ಖಾತೆ ಅಭಿಯಾನ ಆರಂಭಿಸಲಾಗಿದೆ. ಮತ್ತಷ್ಟು ವೇಗ ನೀಡುವ ಸಲುವಾಗಿ ಪ್ರತಿ ಗ್ರಾಮ ಆಡಳಿತಾಧಿಕಾರಿಗಳಿಗೆ ತಿಂಗಳಿಗೆ 100 ಪೌತಿ ಖಾತೆ ಮಾಡಲು ಗುರಿ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna bairegouda) ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಪೋಡಿ ದುರಸ್ಥಿ, ಪೌತಿಖಾತೆ, ಭೂ ಸುರಕ್ಷಾ ಅಭಿಯಾನ ಸೇರಿ ಕಳೆದ ಎರಡೂವರೆ ವರ್ಷದಲ್ಲಿ ಕಂದಾಯ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಅದರಲ್ಲಿ 40 ಲಕ್ಷ ಪಹಣಿ ಮೃತರ ಹೆಸರಿನಲ್ಲಿವೆ. ಪೌತಿ ಖಾತೆ ಅಭಿಯಾನ ಕೈಗೊಂಡಾಗ ಕುಟುಂಬ ವ್ಯಾಜ್ಯಗಳ ಕಾರಣದಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದರು.
ಈವರೆಗೆ 3.20 ಲಕ್ಷ ಜಮೀನು ಪೌತಿ ಖಾತೆ ಯಶಸ್ವಿಯಾಗಿದೆ. ಜನ ಸಾಮಾನ್ಯರು ಸಹಕರಿಸಿದರೆ ಈ ಅಭಿಯಾನವನ್ನು ಮತ್ತಷ್ಟು ವೇಗವಾಗಿ ಮುಗಿಸಬಹುದು. ಇನ್ಮುಂದೆ ಪ್ರತಿಯೊಬ್ಬ ವಿಎಗಳಿಗೆ ತಿಂಗಳಿಗೆ 100 ಪೌತಿ ಖಾತೆ ಟಾರ್ಗೆಟ್ ನೀಡಲಾಗಿದೆ. ಪ್ರಗತಿ ಸಾಧಿಸುವ ವಿಎಗಳಿಗೆ ಪ್ರೋತ್ಸಾಹ ಧನ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವರು ತಿಳಿಸಿದರು.
ರೈತರಿಗೆ ಜಮೀನು ಮಂಜೂರು ಮಾಡಿ ಕೇವಲ ಪಹಣಿ ಕೊಟ್ಟು ಅವರ ಜುಟ್ಟನ್ನು ಸರ್ಕಾರಗಳು ತಮ್ಮ ಕೈನಲ್ಲೇ ಇಟ್ಟುಕೊಂಡಿದ್ದವು. ಪೋಡಿ ಇಲ್ಲದೆ ರೈತರ ಬದುಕು ಅತಂತ್ರ ಸ್ಥಿತಿಯಲ್ಲಿ ಇತ್ತು. ಕಂದಾಯ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಈ ವಿಚಾರ ತಿಳಿದು ಬಡವರಿಗೆ ಪಕ್ಕಾ ದಾಖಲೆ ನೀಡುವ ಸಂಕಲ್ಪ ಮಾಡಿದ್ದೆ ಎಂದರು.
2018ರಿಂದ 2023ರ ನಡುವೆ ಕೇವಲ 8,500 ಮಾತ್ರ ಪೋಡಿ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2025ರ ಜನವರಿಯಲ್ಲಿ ನನ್ನ ಭೂಮಿ ಅಭಿಯಾನ ಆರಂಭಿಸಿ ಒಂದೇ ವರ್ಷದಲ್ಲಿ 1,49,600 ಜಮೀನನ್ನು ದರ್ಖಾಸ್ತು ಪೋಡಿ ಅಳೆತೆಗೆ ತೆಗೆದುಕೊಂಡಿದ್ದೇವೆ. 1.60 ಲಕ್ಷ ದರ್ಖಾಸ್ತು ಪೋಡಿ ಮಾಡಲು ದಾಖಲೆಗಳು ಕಾಣೆಯಾಗಿವೆ. ಅರ್ಹತೆ ಪಡೆದಿರುವ ಪೈಕಿ ಹಾಸನ ಜಿಲ್ಲೆಯಲ್ಲಿ 17 ಸಾವಿರ ದರ್ಖಾಸ್ತು ಪೋಡಿ ಅಳೆತೆಗೆ ತೆಗೆದುಕೊಂಡಿದ್ದು, ಸಾಂಕೇತಿಕವಾಗಿ ಜನರಿಗೆ ಸಮರ್ಪಣೆ ಮಾಡಲು ಡಿ.6ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಕೃಷ್ಣಬೈರೇಗೌಡ ತಿಳಿಸಿದರು.
ತಹಸೀಲ್ದಾರ್ ಮತ್ತು ಎಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಶೀಘ್ರ ವಿಲೇವಾರಿಗೆ ಗಮನ ನೀಡಲಾಗಿದೆ. ತಹಸೀಲ್ದಾರ್ ನ್ಯಾಯಾಲಯದಲ್ಲಿ 10,774 ಪ್ರಕರಣಗಳು ಅವಧಿ ಮೀರಿಯೂ ನ್ಯಾಯತೀರ್ಮಾನವಾಗದೆ ಬಾಕಿ ಇದ್ದವು. ಇದೀಗ ಆ ಸಂಖ್ಯೆ 526ಕ್ಕೆ ಇಳಿಸಲಾಗಿದೆ. ಎಸಿ(ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲಿ 6 ತಿಂಗಳಲ್ಲಿ ಪ್ರಕರಣ ಇತ್ಯರ್ಥ ಮಾಡಬೇಕೆಂದು ನಿಯಮ ಇದ್ದರು 1 ವರ್ಷಕ್ಕಿಂತ ಹೆಚ್ಚು ಅವಧಿ ಮೀರಿದ 59,339 ಪ್ರಕರಣಗಳು ಬಾಕಿ ಇದ್ದವು. ಆದರೆ, ವಿಶೇಷ ಎಸಿ ಗಳನ್ನು ನೇಮಕದ ಮೂಲಕ ಆ ಸಂಖ್ಯೆಯನ್ನು 9,954ಕ್ಕೆ ಇಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಎ,ಆರ್‌ಐಗೆ ಲ್ಯಾಪ್‌ಟಾಪ್
ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಸಚಿವರಿಂದ ವಿಎ ಕಚೇರಿವರೆಗೆ ಇ-ಆಫೀಸ್‌ನಲ್ಲೇ ಕೆಲಸ ಮಾಡಬೇಕು. ಕಾಗದ ವ್ಯವಹಾರಕ್ಕೆ ಇತಿಶ್ರೀ ಹಾಡಬೇಕೆಂಬ ಏಕೈಕ ಕಾರಣಕ್ಕೆ ಕ್ಯಾಬಿನೆಟ್ ಅನುಮತಿಯೊಂದಿಗೆ ಈಗಾಗಲೇ 5 ಸಾವಿರ ವಿಎ, ಆರ್‌ಐಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net