ಗ್ರಾಪಂ ವ್ಯಾಪ್ತಿಯಲ್ಲಿ ಇ-ಸ್ವತ್ತು ಪಡೆಯಲು ಕಾಲಾವಧಿ ಇಲ್ಲ

ಇ-ಸ್ವತ್ತು
ಇ-ಸ್ವತ್ತು
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಈವರೆಗೆ ಆನ್‌ಲೈನ್‌ನಲ್ಲಿ 365 ಆರ್ಜಿ ಸ್ವೀಕಾರ
ಬೆಂಗಳೂರು: ಗ್ರಾಪಂ ವ್ಯಾಪ್ತಿಯ (Gram,Panchayat) ಸ್ವತ್ತುಗಳಿಗೆ ಇ-ಖಾತಾ ಪಡೆಯಲು ಕಾಲಾವಧಿ ನಿಗದಿ ಮಾಡಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇ-ಸ್ವತ್ತು (e-swatu) ಪ್ರಕ್ರಿಯೆ ಮತ್ತು ತಂತ್ರಾಂಶವನ್ನು ಹೆಚ್ಚು ನಾಗರಿಕ ಸ್ನೇಹಿಯಾಗಿ ಅನುಷ್ಠಾನಗೊಳಿಸಲು ಇಲಾಖೆ ಬದ್ಧವಾಗಿದೆ. ಈವರೆಗೆ ಆನ್‌ಲೈನ್‌ನಲ್ಲಿ 365 ಆರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸಲು ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಕಾಲಾವಧಿ ನಿಗದಿಪಡಿಸಿಲ್ಲ. ತಾವು ಇರುವಲ್ಲಿಯೇ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಮಸ್ಯೆ ಮತ್ತು ಸಂದೇಹ ಬಗೆಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ಅನ್ನು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ನಾಗರಿಕ ಸ್ನೇಹಿಯಾಗಿ ಮಾರ್ಪಡಿಸಲಾಗಿದೆ. ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಇಲಾಖೆಯಿಂದ ಸಹಾಯವಾಣಿ (94834-76000) ಪ್ರಾರಂಭಿಸಲಾಗಿದೆ.
ಪ್ರತಿದಿನ ಮೂರು ಸಾವಿರಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಹೆಚ್ಚಿನ ಪ್ರಶ್ನೆಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅನುಮೋದನೆ ಪ್ರಕ್ರಿಯೆ, ಆಸ್ತಿ ವರ್ಗೀಕರಣ ಆಯ್ಕೆ ಮಾಡುವ ವಿಧಾನ, ಇ-ಸ್ವತ್ತು ನಮೂನೆ ವಿತರಿಸಲು ನಿಗದಿಯಾಗಿರುವ ಕಾಲಾವಧಿ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿ ಕೋರುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ನಮೂನೆ-11ಎ ಏನೆಲ್ಲ ಕಡ್ಡಾಯ?

ಗ್ರಾಮಠಾಣಾ ಆಸ್ತಿಗಳಿಗೆ ನಮೂನೆ -11ಎ ಪಡೆಯಲು ದಿಶಾಂಕ್/ತಹಸೀಲ್ದಾರರ ಗ್ರಾಮಠಾಣಾ ನಕ್ಷೆ, ಸೇಲ್ ಡೀಡ್/ಪಿತ್ರಾರ್ಜಿತ ಆಸ್ತಿ/ಆಸ್ತಿ ವಿಭಜನೆ/ಗಿಫ್ಟ್ ಡೀಡ್/ವಿಲ್/ಹಕ್ಕುಪತ್ರ/ರಿಲೀಜ್ ಡೀಡ್/ವರ್ಗಾವಣೆ/ಸೆಟ್ಲೆಮೆಂಟ್/ನ್ಯಾಯಾಲಯದ ಆದೇಶ/ಒಟ್ಟುಗೂಡಿಸು/ವಿಭಾಗಪತ್ರ/ ಅದಲು ಬದಲುಪತ್ರ ಕಡ್ಡಾಯವಾಗಿ ಇರಬೇಕು. ಇನ್ನೂ ಋಣಭಾರ ಪ್ರಮಾಣ ಪತ್ರ-(ನಮೂನೆ-15) ಕಡ್ಡಾಯವಲ್ಲ.
ಸ್ಥಳೀಯ ಯೋಜನಾ ಪ್ರದೇಶದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿ/ಸ್ಥಳೀಯ ಯೋಜನಾ ಪ್ರಾಧಿಕಾರದ ವಿನ್ಯಾಸ ಅನುಮೋದಿತ ಆಸ್ತಿಗಳಿಗೆ 11ಎ ಖಾತಾ ಪಡೆಯಲು ಭೂಪರಿವರ್ತನಾ ಆದೇಶ ಪತ್ರ, ಪ್ರಾಥಮಿಕ ವಿನ್ಯಾಸ ಅನುಮೋದನೆ ಮತ್ತು ನಿವೇಶನ ಬಿಡುಗಡೆ ಆದೇಶ /ಅಂತಿಮ ವಿನ್ಯಾಸ ಅನುಮೋದನೆ ಮತ್ತು ಸೈಟ್ ಬಿಡುಗಡೆ ಆದೇಶ ಮತ್ತು ಅನುಮೋದಿತ ವಿನ್ಯಾಸ ನಕ್ಷೆ ಕಡ್ಡಾಯವಾಗಿ ಇರಬೇಕು. ಇನ್ನೂ ಸೈಟ್ ಹಂಚಿಕೆ ಪತ್ರ/ಸ್ವಾಧೀನ ಪತ್ರ, ಋಣಭಾರ ಪ್ರಮಾಣ ಪತ್ರ-(ನಮೂನೆ-15) ಕಡ್ಡಾಯವಲ್ಲ.

ನಮೂನೆ -11ಬಿಗೆ ಏನೆಲ್ಲ ಬೇಕು?

ಮಾದರಿ ಕಟ್ಟಡ ಉಪ ವಿಧಿಗಳ ಉಪಬಂಧಗಳನ್ನು ಉಲ್ಲಂಘಿಸಿ ಕೃಷಿ ಅಥವಾ ಭೂ-ಪರಿವರ್ತಿತ ಜಮೀನಿನ ಕಟ್ಟಡಗಳಿಗೆ ನಮೂನೆ-11ಬಿ ಪಡೆಯಲು ನೋಂದಾಯಿತ ಪ್ರಮಾಣ ಪತ್ರ /ತೆರಿಗೆ ಪಾವತಿ ರಶೀದಿ (07.04.2025ರ ಪೂರ್ವದ್ದು), ವಿದ್ಯುತ್ ಬಿಲ್ (07.04.2025ರ ಪೂರ್ವದ್ದು), ಆರ್‌ಟಿಸಿ, ಋಣಭಾರ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು. ಭೂ ಪರಿವರ್ತನೆ ಆದೇಶ ಪತ್ರ ಐಚ್ಛಿಕವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿವರ್ತಿತ/ಪರಿವರ್ತನೆಯಿಲ್ಲದ ಅಥವಾ ಕೃಷಿ ಭೂಮಿಯಲ್ಲಿನ ನಿವೇಶನಗಳಿಗೆ ನಮೂನೆ-11ಬಿ ಪಡೆಯಲು ನೋಂದಾಯಿತ ಪ್ರಮಾಣ ಪತ್ರ, ಆರ್‌ಟಿಸಿ, ಋಣಭಾರ ಪ್ರಮಾಣ ಪತ್ರ (ಇಸಿ) ಕಡ್ಡಾಯ ಮತ್ತು ಭೂ-ಪರಿವರ್ತನೆ ಆದೇಶ ಐಚ್ಛಿಕವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net