ತೆರಿಗೆ ಶಿಸ್ತಿಗೆ ಬೆಂಗಳೂರಿಗರ ಸಾಥ್​!| tax

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಿಯಾಯಿತಿ ಸೌಲಭ್ಯ ಸದ್ಬಳಕೆ ಮಾಡಿಕೊಂಡ ಜನತೆ
  • 2 ತಿಂಗಳಲ್ಲೇ <2,933 ಕೋಟಿ ಸಂಗ್ರಹ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ನಾಗರಿಕರು ಈ ಬಾರಿ ಆಸ್ತಿ ತೆರಿಗೆ ಪಾವತಿಯಲ್ಲಿ ಹೊಸ ದಾಖಲೆ ಬರೆಯುವತ್ತ ಹೆಜ್ಜೆ ಇಟ್ಟಿದ್ದಾರೆ.
2026-27ನೇ ಆರ್ಥಿಕ ವರ್ಷದ ಮೊದಲ ಎರಡು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಐದು ನಗರ ಪಾಲಿಕೆಗಳು ಸೇರಿ ಒಟ್ಟು 2,933 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ್ದು, ವಾರ್ಷಿಕ ಗುರಿಯ ಶೇ.47 ಸಾಧನೆ ಮಾಡಿವೆ. ತೆರಿಗೆ ಸಂಗ್ರಹದ ಈ ವೇಗ ಜಿಬಿಎ ಕಂದಾಯ ವ್ಯವಸ್ಥೆಗೆ ಹೊಸ ಚೈತನ್ಯ ತುಂಬಿದೆ.
ಈ ವರ್ಷ 6 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿರುವ ಜಿಬಿಎ, ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ಅರ್ಧ ಗುರಿ ಮುಟ್ಟಿರುವುದು ಅಧಿಕಾರಿಗಳ ವಿಶ್ವಾಸವನ್ನು ಹೆಚ್ಚಿಸಿದೆ. ಶೇ.5 ರಿಯಾಯಿತಿ ಘೋಷಿಸಿರುವುದು ತೆರಿಗೆದಾರರನ್ನು ಮುಂಗಡ ಪಾವತಿಗೆ ಪ್ರೇರೇಪಿಸಿದೆ. ಇದರ ಪರಿಣಾಮವಾಗಿ ಆರಂಭಿಕ ತಿಂಗಳಲ್ಲೇ ಪಾಲಿಕೆ ಕಚೇರಿಗಳಲ್ಲಿ ತೆರಿಗೆ ಪಾವತಿಯ ಚಟುವಟಿಕೆ ಹೆಚ್ಚಾಗಿದೆ. ಹಲವು ವರ್ಷಗಳಿಂದ ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದ ಆಸ್ತಿಗಳನ್ನು ಗುರುತಿಸಿ ಬಿ- ಟು ಎ ಖಾತಾ ಯೋಜನೆಯಡಿ ತೆರಿಗೆ ಜಾಲಕ್ಕೆ ತರುವ ಕಾರ್ಯಾಚರಣೆ ಕೂಡ ಫಲ ನೀಡಿದೆ. ಪ್ರಸ್ತುತ ವಾರಕ್ಕೆ 10&13 ಕೋಟಿ ರೂ.ವರೆಗೆ ತೆರಿಗೆ ಸಂಗ್ರಹವಾಗುತ್ತಿದ್ದು, ಅಧಿಕಾರಿಗಳಿಗೆ ವಾರ ವಾರದ ಗುರಿ ನಿಗದಿಪಡಿಸಿರುವುದು ವಸೂಲಾತಿಗೆ ಮತ್ತಷ್ಟು ವೇಗ ನೀಡಿದೆ. ಇದೇ ವೇಳೆ ಬಾಕಿ ತೆರಿಗೆ ಉಳಿಸಿಕೊಂಡಿರುವ ಆಸ್ತಿ ಮಾಲೀಕರ ವಿರುದ್ಧ ಪಾಲಿಕೆಗಳು ಕಠಿಣ ನಿಲುವು ತಾಳಿವೆ. ಹೆಚ್ಚಿನ ಮೊತ್ತ ಬಾಕಿ ಉಳಿಸಿಕೊಂಡವರಿಗೆ ನೋಟಿಸ್​ ಜಾರಿ ಮಾಡಲಾಗುತ್ತಿದ್ದು, ಕೆಲವು ವಾಣಿಜ್ಯ ಕಟ್ಟಡಗಳನ್ನು ಸೀಜ್​ ಮಾಡುವ ಕ್ರಮಕ್ಕೂ ಮುಂದಾಗಿವೆ.
ದಾಖಲೆಯ ಸಂಗ್ರಹ!
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಸುಮಾರು 300 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ. ಉಳಿದ ಅವಧಿಯಲ್ಲಿ ಮತ್ತಷ್ಟು 3 ಸಾವಿರ ಕೋಟಿ ರೂ.ಗೂ ಅಧಿಕ ತೆರಿಗೆ ಸಂಗ್ರಹಿಸಿ ಗುರಿಯನ್ನು ಮೀರಿಸುವ ವಿಶ್ವಾಸದಲ್ಲಿ ಜಿಬಿಎ ಇದೆ. ಪೂರ್ವ ಪಾಲಿಕೆ 788 ಕೋಟಿ ರೂ. ಸಂಗ್ರಹದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪಶ್ಚಿಮ, ಕೇಂದ್ರ, ದಕ್ಷಿಣ ಹಾಗೂ ಉತ್ತರ ಪಾಲಿಕೆಗಳೂ ಗಮನಾರ್ಹ ಸಾಧನೆ ದಾಖಲಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net